
ನವದೆಹಲಿ, 18 ಮಾರ್ಚ್ (ಹಿ.ಸ.):
ಆ್ಯಂಕರ್:ರಾಜಧಾನಿ ನವದೆಹಲಿಯ ದ್ವಾರಕಾ ಜಿಲ್ಲೆಯ ಪಾಲಂ ಪ್ರದೇಶದ ರಾಮ್ ಚೌಕ್ ಮಾರುಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಮೃತರಲ್ಲಿ ಮೂವರು ಬಾಲಕಿಯರು ಸೇರಿದ್ದಾರೆ.
ಬೆಳಿಗ್ಗೆ ಸುಮಾರು 7:04 ಗಂಟೆಗೆ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ಭಾರೀ ಅಗ್ನಿಯಾಗಿ ವ್ಯಾಪಿಸಿದೆ. ಕಟ್ಟಡದ ನೆಲಮಾಳಿಗೆ, ಹಾಗೂ ಮೊದಲ ಮಹಡಿಯಲ್ಲಿ ಬಟ್ಟೆ ಮತ್ತು ಸೌಂದರ್ಯವರ್ಧಕಗಳ ಶೋ ರೂಂಗಳು ಇದ್ದುದರಿಂದ ಬೆಂಕಿ ವೇಗವಾಗಿ ಹರಡಿದುದಾಗಿ ತಿಳಿದುಬಂದಿದೆ. ಮೇಲ್ಮಹಡಿಗಳಲ್ಲಿ ವಾಸಿಸುತ್ತಿದ್ದ ಕುಟುಂಬದವರು ಒಳಗೆ ಸಿಲುಕಿಕೊಂಡಿದ್ದಾರೆ.
ಬೆಂಕಿಯಿಂದ ಪಾರಾಗಲು ಕೆಲವರು ಕಟ್ಟಡದಿಂದ ಹಾರಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಸುಟ್ಟು ಕರಕಲಾಗಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸುಮಾರು 20 ಅಗ್ನಿಶಾಮಕ ವಾಹನಗಳು ಹಾಗೂ 11 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ ಹಲವು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈವರೆಗೆ ಕನಿಷ್ಠ 10 ಮಂದಿಯನ್ನು ರಕ್ಷಿಸಲಾಗಿದೆ.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಐಜಿಐ ಆಸ್ಪತ್ರೆಯಲ್ಲಿ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದು, ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ 19 ವರ್ಷದ ಯುವಕನನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಕುರಿತು ವೈಜ್ಞಾನಿಕ ಪರೀಕ್ಷೆಗಾಗಿ ಎಫ್‌ಎಸ್‌ಎಲ್ ತಂಡವನ್ನು ಕರೆಸಲಾಗಿದೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಬಿಎಸ್‌ಇಎಸ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಪಾಲಂ ಮಾರುಕಟ್ಟೆಯ ಈ ದುರಂತವು ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿದ್ದು, ಮೃತರ ಕುಟುಂಬಗಳಿಗೆ ತೀವ್ರ ಆಘಾತ ತಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa