
ಧಾರವಾಡ, 17 ಮಾರ್ಚ್ (ಹಿ.ಸ.):
ಆ್ಯಂಕರ್:
ಕುಟುಂಬದ ನೋವು ನುಂಗಿ ನಲಿವು ತೋರಿಸುವ ಪ್ರತಿ ಮಹಿಳೆ ಸಮಾಜದ ಪ್ರತಿಬಿಂಬವಾಗಿದ್ದಾಳೆ. ಮಹಿಳೆಯ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ. ಕುಟುಂಬಕ್ಕೆ ಸಂಸ್ಕಾರ, ವಾತ್ಸಲ್ಯ, ಆರೋಗ್ಯ ನೀಡುವ ಕೇಂದ್ರಬಿಂದು ಆಗಿದ್ದಾಳೆ ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಇಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ರ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಮಹಿಳೆಯರ ಸಶಕ್ತಿಕರಣ ಮತ್ತು ಆರ್ಥಿಕ ಸಬಲೀಕರಣ ಕುಟುಂಬದ ಭದ್ರತೆಯನ್ನು ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಮಹಿಳೆ ತಾಗ್ಯ ಮನೋಭಾವದಿಂದ, ನಿಸ್ವಾರ್ಥದಿಂದ ದುಡಿಯುತ್ತಾಳೆ. ಅವಳ ದುಡಿಮೆಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಿದೆ. ಕೋವಿಡ್‍ದಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರನ್ನು ರಕ್ಷಿಸಿದ ಶ್ರೇಯಸ್ಸು ಮಹಿಳೆಯರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಮತ್ತು ಗೌರವಿಸುವುದು ಮಹಿಳೆಯರಿಂದಲೂ ಆಗಬೇಕು. ಆಧುನಿಕ ಸಂದರ್ಭದಲ್ಲಿ ಸಮಾಜದಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ಶಿಕ್ಷಣ, ಕ್ರೀಡೆ, ಸಮಾಜ ಸೇವೆ, ಸರ್ಕಾರಿ ನೌಕರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಈಗ ಸಮಾಜದಲ್ಲಿ ತಾರತಮ್ಯ ಕಡಿಮೆಯಾಗಿ ಸಮಾನತೆ ಕಾಣುತ್ತಿದೆ. ಮಹಿಳೆಯರ ಮಹತ್ವ ಮತ್ತು ಅವರ ಕಾರ್ಯದ ಶಕ್ತಿ ಅರಿವಾಗಿದೆ ಎಂದು ಅವರು ಹೇಳಿದರು.
ಪುರುಷರ ಪ್ರೋತ್ಸಾಹ ಮತ್ತು ಸಮಾನತೆಯ ಮನೊಭಾವ ಹೆಚ್ಚುತ್ತಿರುವದರಿಂದ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಸಹ ಮುನ್ನುಗ್ಗುತ್ತಿದ್ದಾರೆ. ಸರ್ಕಾರಗಳು ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಅನೇಕ ಕಾನೂನು, ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸಮರ್ಪಕ ಅನುಷ್ಠಾನ ಮತ್ತು ಮಹಿಳೆಯ ಸಕ್ರಿಯ ಪಾಲ್ಗೊಳ್ಳುವಿಕೆಯು ಸಮಾಜದ ಘನತೆಯನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಜಿಲ್ಲಾ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಮತ್ತು ಜಿಲ್ಲಾ ನ್ಯಾಯಾಧೀಶರಾದ ಸುವರ್ಣಾ ಕೆ.ಮಿರ್ಜಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕೂ ಮೊದಲು ಮಹಿಳೆಯರಿಗೆ ಸಮಾನ ಅವಕಾಶಗಳು ಕಡಿಮೆ ಇದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಹಿಂದಿನ ಕಾಲದಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತಿದ್ದಾರೆ. ಜೊತೆಗೆ, ನಗರ ಪ್ರದೇಶಗಳಲ್ಲಿ ಮಹಿಳೆಯರು ಮನೆ ಜವಾಬ್ದಾರಿಗಳ ಜೊತೆಗೆ ಕಚೇರಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಆದರೆ, ಈ ಎಲ್ಲ ಸಾಧನೆಗಳ ನಡುವೆಯೂ ಮಹಿಳೆಯರು ಮಾನಸಿಕ ಒತ್ತಡ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲಸ ಮತ್ತು ಕುಟುಂಬದ ಸಮತೋಲನ ಸಾಧಿಸುವಲ್ಲಿ ಅವರು ಹಲವು ಒತ್ತಡಗಳಿಗೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಮಹಿಳೆಯರು ನಿರ್ಭೀತಿಯಿಂದ ಸಮಾಜದಲ್ಲಿ ಬದುಕಬೇಕು ಎಂಬ ಆಶಯ ಇನ್ನೂ ಸಂಪೂರ್ಣವಾಗಿ ಸಾಕಾರವಾಗಿಲ್ಲ. ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಕರ್ನಾಟಕ ಬಾಲವಿಕಾಸ ಅಕಾಡಮಿಯ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಸಿಡಿಪಿಓಗಳಾದ ಉಮಾ ಬಳ್ಳೊಳ್ಳಿ, ಸುನೀತಾ ಪಾಟೀಲ, ಮಂಜುನಾಥ ಕುಂಬಾರ, ವಿದ್ಯಾ ಬಡಿಗೇರ, ಗಾಯತ್ರಿ ಪಾಟೀಲ, ಅತೀಕಾ ಸಿದ್ದಕ್ಕಿ ಅವರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತಾ ನಾಡಗೇರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ.ಕಮಲಾ ಬೈಲೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ ಮಾನೆ, ಸರ್ ಸಿದ್ದಪ್ಪ ಕಂಬಳಿ ಕಾನೂನು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ, ಡಿಮ್ಹಾನ್ಸ್ ಸಹಾಯಕ ಪ್ರಾಧ್ಯಪಕಿ ಡಾ. ಸ್ವಪ್ನಾ ಪಾಂಡುರಂಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ, ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕೀಯರಿಗೆ ಮತ್ತು ಸರ್ಕಾರೇತರ ಸಂಸ್ಥೆಗಳ ಮಹಿಳಾ ಸಿಬ್ಬಂದಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕೀಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa