ಬಾದಾಮಿ ಸರಕಾರಿ ಆಸ್ಪತ್ರೆಯ ಅವಾಂತರ:ಔಷಧ ಖಾಲಿ:ಲಕ್ಷಾಂತರ ಅನುದಾನ ದುರ್ಬಳಕೆ:ವೈದ್ಯರ ಅಮಾನತಿಗೆ ಆಗ್ರಹ
ಬಾಗಲಕೋಟೆ, 16 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಸರಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಔಷಧಗಳ ಕೊರತೆ ಉಂಟಾಗಿದ್ದು, ವಿವಿಧ ಯೋಜನೆಗಳಡಿ ಬಂದ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತಾಲೂಕು ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿ
ಡಾಕ್ಟರ್


ಬಾಗಲಕೋಟೆ, 16 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಸರಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಔಷಧಗಳ ಕೊರತೆ ಉಂಟಾಗಿದ್ದು, ವಿವಿಧ ಯೋಜನೆಗಳಡಿ ಬಂದ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತಾಲೂಕು ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ರಕ್ತ ತಪಾಸಣಾ ಘಟಕವೇ ಬಂದ್ ಆಗಿರುವುದಾಗಿ ತಿಳಿದುಬಂದಿದೆ. ಕಿವಿ ಮತ್ತು ಕಣ್ಣಿಗೆ ಹಾಕುವ ಡ್ರಾಪ್ಸ್ಗಳು ಸೇರಿದಂತೆ ಸಾಮಾನ್ಯವಾಗಿ ಬಳಸುವ ಜ್ವರ, ಕೆಮ್ಮು, ನೆಗಡಿ ಔಷಧಗಳೂ ಖಾಲಿಯಾಗಿವೆ.

ಮಕ್ಕಳಿಗೆ ನೀಡುವ ವಿಟಮಿನ್ ಡಿ3 ಔಷಧ ಕೂಡ ಲಭ್ಯವಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದೈಹಿಕ ವಿಕಲತೆಯುಳ್ಳವರಿಗೆ ನೀಡುವ ಯುಡಿಐಡಿ ಕಾರ್ಡ್ ಮಾಡಲು ಸಹಿ ಮಾಡುವುದಕ್ಕಾಗಿ ₹5 ಸಾವಿರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಣ ನೀಡದಿದ್ದರೆ ಸಹಿ ಮಾಡುವುದಿಲ್ಲವೆಂದು ಗ್ರಾಮ ಪಂಚಾಯತ್ಗಳ ವಿಆರ್.ಡಬ್ಲು ಸಿಬ್ಬಂದಿಗಳಿಗೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗಿದೆ.

ಎನ್ಎಚ್ಎಂ, ಆಯುಷ್ಮಾನ್ ಭಾರತ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಬಂದ ಲಕ್ಷಾಂತರ ರೂಪಾಯಿ ಅನುದಾನವನ್ನು ಡುಪ್ಲಿಕೇಟ್ ವೌಚರ್ಗಳ ಮೂಲಕ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಾಹಿತಿ ಸಂಗ್ರಹಿಸಿ, ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ ಆಡಳಿತ ವೈದ್ಯಾಧಿಕಾರಿ ಡಾ. ವಿ.ಕೆ. ಶೆಟ್ಟರ ಅವರು ಅಶ್ಲೀಲ ಪದಗಳನ್ನು ಬಳಸಿ ಬೈದಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಪತ್ರಕರ್ತರು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ ಅವರಿಗೂ ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಎಚ್.ಓ. ಭರವಸೆ ನೀಡಿದ್ದಾರೆ. ಇನ್ನು ಪತ್ರಕರ್ತರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ವೈದ್ಯರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಡಾ. ಶೆಟ್ಟರ ಅವರನ್ನು ತಕ್ಷಣ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande