
ಚಂಡೀಗಡ, 14 ಮಾರ್ಚ್ (ಹಿ.ಸ.):
ಆ್ಯಂಕರ್:
ಅಮಿತ್ ಶಾ ಅವರು ಪಂಜಾಬ್ ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾಡುತ್ತಾ, 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಸರ್ಕಾರ ರಚಿಸಲಿದೆ ಎಂದು ಘೋಷಿಸಿದರು.
ಶನಿವಾರ ಮೋಗಾ ಜಿಲ್ಲೆಯ ಕಿಲ್ಲಿ ಚಾಹಲಾಂ ಗ್ರಾಮದಲ್ಲಿ ನಡೆದ ಬಿಜೆಪಿ ಮೊದಲ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದುವರೆಗೆ ಪಂಜಾಬಿನಲ್ಲಿ ಬಿಜೆಪಿ “ಚಿಕ್ಕ ಸಹೋದರ”ದ ಪಾತ್ರದಲ್ಲಿತ್ತು. ಆದರೆ ಈಗ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಮಯ ಬಂದಿದೆ ಎಂದು ಹೇಳಿದರು. ಪಂಜಾಬಿನ ಜನತೆ ಈಗ ಬಿಜೆಪಿಯೊಂದಿಗೆ ನಿಂತಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಂಜಾಬಿನ ಪ್ರಮುಖ ಸಮಸ್ಯೆಯಾದ ಮಾದಕ ವಸ್ತುಗಳ ಕುರಿತು ಮಾತನಾಡಿದ ಅಮಿತ್ ಶಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಆಡಳಿತಗಳು ರಾಜ್ಯದಲ್ಲಿ ನಶಾ ಸಮಸ್ಯೆಯನ್ನು ಹೆಚ್ಚಿಸಿವೆ ಎಂದು ಆರೋಪಿಸಿದರು. ನಾಲ್ಕು ತಿಂಗಳಲ್ಲಿ ಪಂಜಾಬನ್ನು ನಶಾಮುಕ್ತ ಮಾಡುವುದಾಗಿ ಹೇಳಿದ್ದ ಆಮ್ ಆದ್ಮಿ ಪಕ್ಷದ ಸರ್ಕಾರವೂ ಈ ದಿಕ್ಕಿನಲ್ಲಿ ಯಾವುದೇ ಸಾಧನೆ ಮಾಡಿಲ್ಲ ಎಂದು ಅವರು ಟೀಕಿಸಿದರು. ಪಂಜಾಬನ್ನು ನಶಾಮುಕ್ತ ರಾಜ್ಯವಾಗಿಸಲು ಬಿಜೆಪಿ ಮಾತ್ರ ಸಮರ್ಥವಾಗಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ತನ್ನ ವಾಗ್ದಾನದಂತೆ ಕಾಶ್ಮೀರದಲ್ಲಿ Article 370 ಅನ್ನು ರದ್ದುಪಡಿಸಿದೆ ಎಂದು ಅವರು ಹೇಳಿದರು. ದೇಶದಲ್ಲಿ ನಕ್ಸಲ್ವಾದ ಅಂತ್ಯ ಹಂತಕ್ಕೆ ತಲುಪಿದೆ ಎಂದು ಹೇಳಿದರು. ಪಂಜಾಬಿನ ದೊಡ್ಡ ಸಮಸ್ಯೆಗಳು ಸಾಲ, ಮಾದಕ ವಸ್ತುಗಳು, ಧರ್ಮಾಂತರ, ಭ್ರಷ್ಟಾಚಾರ ಮತ್ತು ಗ್ಯಾಂಗ್‌ಸ್ಟರ್‌ವಾದವಾಗಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೈಗಾರಿಕೆಗಳು ಹೊರರಾಜ್ಯಗಳಿಗೆ ಸ್ಥಳಾಂತರವಾಗುತ್ತಿವೆ. ರೈತರ ಬಗ್ಗೆ ಕಾಳಜಿ ವಹಿಸುವವರಿಲ್ಲ ಮತ್ತು ಯುವಕರ ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿಲ್ಲ ಎಂದು ಅವರು ಆರೋಪಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನಲ್ಲಿ ಬಿಜೆಪಿಗೆ ಸುಮಾರು 19 ಶೇಕಡಾ ಮತಗಳು ಲಭಿಸಿವೆ ಎಂದು ಶಾ ಹೇಳಿದರು. ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಇದೇ ಮಟ್ಟದ ಮತಗಳನ್ನು ಪಡೆದುಕೊಂಡ ಬಳಿಕ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸರ್ಕಾರ ರಚಿಸಿತ್ತು ಎಂದು ಅವರು ಉದಾಹರಣೆ ನೀಡಿದರು.
ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವಿಚಾರವನ್ನು ತೀವ್ರವಾಗಿ ಟೀಕಿಸಿದ ಶಾ, ಪಂಜಾಬಿನಲ್ಲಿ ಸರ್ಕಾರವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಸರ್ಕಾರ ಇದ್ದಿದ್ದರೆ ಕಾನೂನು ಸುವ್ಯವಸ್ಥೆ ಈ ಸ್ಥಿತಿಯಲ್ಲಿ ಇರಲಿಲ್ಲ, ಮಾದಕ ವಸ್ತುಗಳ ವ್ಯಾಪಾರ ಇಷ್ಟು ಹೆಚ್ಚಾಗುತ್ತಿರಲಿಲ್ಲ ಮತ್ತು ರೈತರ ಸ್ಥಿತಿ ಇಷ್ಟು ಕಷ್ಟಕರವಾಗುತ್ತಿರಲಿಲ್ಲ ಎಂದು ಹೇಳಿದರು.
ಸಿಖ್ ಗಲಭೆಗಳ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ದಂಗೆ ಪೀಡಿತ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ನೀಡಿದೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಆಡಳಿತದ ವೇಳೆ ನಡೆದ ಆಪರೇಷನ್ ಬ್ಲೂ ಸ್ಟಾರ್ ಕ್ರಮವನ್ನು ಉಲ್ಲೇಖಿಸಿ ಅಕಾಲ ತಖ್ತ್ ಸಾಹಿಬ್ ಮೇಲೆ ಟ್ಯಾಂಕ್‌ಗಳನ್ನು ಚಲಾಯಿಸಲಾಯಿತು ಎಂದು ಆರೋಪಿಸಿದರು.
ಅವರು ಮುಂದುವರೆದು, ಬಿಜೆಪಿ ಅಫ್ಘಾನಿಸ್ತಾನದಿಂದ ಬಂದ ಸಿಖ್ ಶರಣಾರ್ಥಿಗಳಿಗೆ ಪೌರತ್ವ ನೀಡಿದೆ ಮತ್ತು ಕರ್ತಾರ್‌ಪುರ ಕಾರಿಡಾರ್ ಆರಂಭಿಸಿದೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಸಿಖ್ ಗುರುಗಳ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಕಾರ್ತಾರ್ಪುರ ಸಾಹಿಬ್ ಇಂದು ಪಾಕಿಸ್ತಾನದ ಬದಲು ಭಾರತದ ಭಾಗವಾಗಿರುತ್ತಿತ್ತು ಎಂದು ಹೇಳಿದರು.
ಪಂಜಾಬಿನಲ್ಲಿ ಧರ್ಮಾಂತರ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ ಎಂದು ಹೇಳಿದ ಅಮಿತ್ ಶಾ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಮತಬ್ಯಾಂಕ್ ರಾಜಕೀಯಕ್ಕಾಗಿ ಇದನ್ನು ಉತ್ತೇಜಿಸಿವೆ ಎಂದು ಆರೋಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಧರ್ಮಾಂತರ ವಿರುದ್ಧ ಕಠಿಣ ಕಾನೂನು ತರಲಾಗುವುದು ಎಂದು ಅವರು ಘೋಷಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa