
ಬಾಗಲಕೋಟೆ, 14 ಮಾರ್ಚ್ (ಹಿ.ಸ.)
ಆ್ಯಂಕರ್ : ರೈತರ ಹೆಸರಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣಕ್ಕೆ ಕನ್ನ ಹಾಕಿದ ಬೃಹತ್ ವಂಚನೆ ಪ್ರಕರಣ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಬೆಳೆಯದಿದ್ದರೂ ಬೆಳೆದಿದ್ದೇವೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸುಮಾರು 30.28 ಕೋಟಿ ರೂಪಾಯಿ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಮುಧೋಳ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡಮನಿ ನೀಡಿದ ದೂರಿನ ಮೇರೆಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಟಗುಡ್ಡ ಗ್ರಾಮದ ಏಳು ಮಂದಿ ಹಾಗೂ ಯುನಿವರ್ಸಲ್ ಸೋಂಪು ಇನ್ಸುರೆನ್ಸ್ ಕಂಪನಿಯ ನಾಲ್ವರು ಸಿಬ್ಬಂದಿ ಸೇರಿ ಒಟ್ಟು 11 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತನಿಖೆಯ ಪ್ರಕಾರ 2020-21 ರಿಂದಲೇ ಈ ವಂಚನೆ ನಡೆಯುತ್ತಿದ್ದು, ವಾಸ್ತವವಾಗಿ ಬೆಳೆ ಬೆಳೆಯದಿದ್ದರೂ ಅಥವಾ ಅಲ್ಪ ಪ್ರದೇಶದಲ್ಲಿ ಬೆಳೆ ಬೆಳೆದಿದ್ದರೂ ದಾಖಲೆಗಳಲ್ಲಿ ಹೆಚ್ಚಿನ ವಿಸ್ತೀರ್ಣ ತೋರಿಸಿ ವಿಮಾ ಹಣ ಪಡೆದುಕೊಂಡಿರುವುದು ಬಹಿರಂಗವಾಗಿದೆ.
ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಶಿಕಟ್ಟಿ, ಶ್ರೀನಿವಾಸ ಪಾಟೀಲ, ಕಲ್ಮೇಶ ಜುನ್ನೂರ ಸೇರಿದಂತೆ ಏಳು ಮಂದಿ ಸ್ಥಳೀಯರು ಹಾಗೂ ವಿಮಾ ಕಂಪನಿಯ ಯಶವಂತ, ರಾಕೇಶ, ಪ್ರಕಾಶ ಮತ್ತು ಅನೀಲ ಎಂಬವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಈ ವರ್ಷವೊಂದರಲ್ಲೇ ಸುಮಾರು 28.51 ಲಕ್ಷ ರೂಪಾಯಿ ದುರ್ಬಳಕೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯ ಸಿಬ್ಬಂದಿಗಳ ಪಾರದರ್ಶಕತೆಯ ಕೊರತೆಯನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟುಮಾಡಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಧೋಳ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಭಾವಿಗಳ ಕೈವಾಡವೂ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಕರಣ ಇನ್ನಷ್ಟು ದೊಡ್ಡ ಜಾಲವನ್ನು ಬಯಲು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande