
ಬಾಗಲಕೋಟೆ, 13 ಮಾರ್ಚ್ (ಹಿ.ಸ.)
ಆ್ಯಂಕರ್ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಜನಸಾಮಾನ್ಯರ ವೇದಿಕೆ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಆಡಳಿತ ಸೌಧದ ಎದುರು ಯುವ ಅಧಿವೇಶನ ನಡೆಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಈ ಅಧಿವೇಶನಕ್ಕೆ ಶಿವನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವು ಉದ್ಯೋಗಾಕಾಂಕ್ಷಿಗಳು, ರೈತ ಸಂಘಟನೆಗಳ ಪದಾಧಿಕಾರಿಗಳು, ಚಿಂತಕರು ಹಾಗೂ ಯುವಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಜನಸಾಮಾನ್ಯರ ವೇದಿಕೆಯ ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ, ರಾಜ್ಯ ಸರ್ಕಾರದ ಸುಮಾರು 2.84 ಲಕ್ಷ ಹಾಗೂ ಕೇಂದ್ರ ಸರ್ಕಾರದ 9.64 ಲಕ್ಷ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಕೆಪಿಎಸ್ಸಿ, ಕೆಇಎ, ಕೆಎಸ್ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ ಖಾಲಿ ಹುದ್ದೆಗಳ ವಿವರ ಮತ್ತು ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ, ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿ, ಯುಪಿಎಸ್ಸಿ ಸೇರಿದಂತೆ ಎಲ್ಲಾ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೂ ನಡೆಸಬೇಕು, ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು ಹಾಗೂ ದುಬಾರಿ ಅರ್ಜಿ ಶುಲ್ಕವನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ ಕೆಪಿಎಸ್ಸಿಯನ್ನು ಯುಪಿಎಸ್ಸಿ ಮಾದರಿಯಲ್ಲಿ ಪುನರ್ರಚನೆ ಮಾಡಬೇಕೆಂದೂ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರು, ಡಿ.ಎಂ. ನದಾಫ್ ಹಾಗೂ ಸಿದ್ದರಾಮ ಮಠಪತಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ತಹಶೀಲ್ದಾರ ವಿನೋದ ಹತ್ತಳ್ಳಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರ್ಜುನ ನದಾಫ್, ಸದಾಶಿವ ಅಗೋಜಿ, ಶ್ರೀಶೈಲ ಮೇಟಿ, ಜಂಗಪ್ಪ ಕಲ್ಲಾರಿ, ಶೇಖರ್ ಕಾಖಂಡಕಿ, ರಾಜೇಂದ್ರ ಪಾಟೀಲ, ಗಂಗಪ್ಪ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande