ಶಾಲಾ ವಾರ್ಷಿಕೋತ್ಸವದಲ್ಲಿ ಗಲಾಟೆ: ಯುವಕನ ಮೇಲೆ ಹಲ್ಲೆ, ಚಿಕಿತ್ಸೆ ವೇಳೆ ಸಾವು
ಬಾಗಲಕೋಟೆ, 13 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ನಡೆದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಉಂಟಾದ ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ವೇಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಸಾವಳಗಿ ಗ್ರಾಮದ ಸುದೀಪ
Death


ಬಾಗಲಕೋಟೆ, 13 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ

ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ನಡೆದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಉಂಟಾದ ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ವೇಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಸಾವಳಗಿ ಗ್ರಾಮದ ಸುದೀಪ್ ಪಾಂಗೆ (19) ಎಂದು ಗುರುತಿಸಲಾಗಿದೆ.

ಮಾರ್ಚ್ 11ರ ರಾತ್ರಿ ಗ್ರಾಮದ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಇರುವ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸುದೀಪ್ ಪಾಂಗೆ ಶಾಲೆಯ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ಕೆಳಗೆ ನಡೆಯುತ್ತಿದ್ದ ಕಾರ್ಯಕ್ರಮದತ್ತ ಕಲ್ಲು ಎಸೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಉಡುಪು ಬದಲಾಯಿಸುತ್ತಿದ್ದ ಸ್ಥಳದತ್ತ ಇಣುಕಿ ನೋಡಿದ್ದಾನೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಈ ವಿಷಯ ತಿಳಿದು ಸ್ಥಳದಲ್ಲಿದ್ದ ಕೆಲ ಯುವಕರು ಆಕ್ರೋಶಗೊಂಡು ಸುದೀಪ್ ಪಾಂಗೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುದೀಪ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಹಲ್ಲೆಯಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ವಾರ್ಷಿಕೋತ್ಸವದ ವೇಳೆ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ವಿಷಾದಕ್ಕೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande