ಎಲ್ ಪಿ ಜಿ ಸಮಸ್ಯೆ ಒಂದು ವಾರ ಮುಂದುವರೆಯುವ ಸಾಧ್ಯತೆ:ಸಚಿವ ಮುನಿಯಪ್ಪ
ಬೆಂಗಳೂರು, 13 ಮಾರ್ಚ್ (ಹಿ.ಸ.): ಆ್ಯಂಕರ್:ರಾಜ್ಯದಲ್ಲಿ ವಾಣಿಜ್ಯ ಬಳಕೆ ಅಡಿಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಹೋಟೆಲ್‌ಗಳಿಗೆ ಇನ್ನೂ ಒಂದು ವಾರದಿಂದ ಹತ್ತು ದಿನಗಳವರೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
Muniyappa


ಬೆಂಗಳೂರು, 13 ಮಾರ್ಚ್ (ಹಿ.ಸ.):

ಆ್ಯಂಕರ್:ರಾಜ್ಯದಲ್ಲಿ ವಾಣಿಜ್ಯ ಬಳಕೆ ಅಡಿಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಹೋಟೆಲ್‌ಗಳಿಗೆ ಇನ್ನೂ ಒಂದು ವಾರದಿಂದ ಹತ್ತು ದಿನಗಳವರೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ವಿಷಯ ಪ್ರಸ್ತಾಪವಾದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಐವನ್ ಡಿಸೋಜಾ ಮತ್ತು ನಾಗರಾಜ್ ಯಾದವ್ ರಾಜ್ಯದಲ್ಲಿ ಅನಿಲದ ಕೊರತೆ ಗಂಭೀರವಾಗಿದ್ದು ಆಟೋ ಚಾಲಕರು ಹಾಗೂ ಹೋಟೆಲ್ ಉದ್ಯಮಿಗಳಿಗೆ ಅನಿಲ ಸಿಗುತ್ತಿಲ್ಲ ಎಂದು ಹೇಳಿದರು. ಕೆಲವು ಕಡೆಗಳಲ್ಲಿ ಅನಿಲವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಅವರು ಸರ್ಕಾರದ ಗಮನಕ್ಕೆ ತಂದರು.

ಹೋಟೆಲ್‌ಗಳಲ್ಲಿ ತಿಂಡಿ-ಊಟ ವ್ಯವಸ್ಥೆ ವ್ಯತ್ಯಯಗೊಂಡಿದ್ದು, ವಿಶ್ವವಿದ್ಯಾಲಯಗಳ ವಸತಿ ನಿಲಯಗಳಲ್ಲೂ ಅನಿಲದ ಕೊರತೆಯಿಂದ ಊಟ ವ್ಯವಸ್ಥೆಗೆ ತೊಂದರೆ ಉಂಟಾಗಿದೆ. ಇಂದಿರಾ ಕ್ಯಾಂಟೀನ್‌, ಆಸ್ಪತ್ರೆಗಳು ಹಾಗೂ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೂ ಅಡಚಣೆ ಉಂಟಾಗಿದೆ ಎಂದು ಸದಸ್ಯರು ಹೇಳಿದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರವಾಗುವವರೆಗೆ ವಿಶ್ವವಿದ್ಯಾಲಯಗಳಿಗೆ ರಜೆ ನೀಡುವ ವಿಚಾರವನ್ನೂ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಅನಿಲ ಪೂರೈಕೆ ಸಂಸ್ಥೆಗಳೊಂದಿಗೆ ಇಂದು ಸಹ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಗಳು, ಹಾಸ್ಟೆಲ್‌ಗಳು ಮತ್ತು ವಸತಿ ನಿಲಯಗಳಿಗೆ ಆದ್ಯತೆಯಾಗಿ ವಾಣಿಜ್ಯ ಬಳಕೆ ಅನಿಲ ಪೂರೈಕೆ ಮಾಡಲಾಗುತ್ತದೆ ಎಂದರು.

ಪ್ರಸ್ತುತ ಅನಿಲದ ಸಂಗ್ರಹ ಕೊರತೆಯಿಂದ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ. ಈಗಾಗಲೇ ಎರಡು ಹಡಗುಗಳು ಭಾರತಕ್ಕೆ ಬಂದಿದ್ದು, ಇನ್ನೂ 10 ರಿಂದ 12 ಹಡಗುಗಳು ಬರಲಿವೆ. ಅವು ಬಂದ ನಂತರ ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಚಿವರು ಹೇಳಿದರು.

ಅಲ್ಲಿವರೆಗೆ ಹೋಟೆಲ್ ಮಾಲೀಕರು ಸಾಧ್ಯವಾದರೆ ವಿದ್ಯುತ್ ಒಲೆಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ಒಂದು ವಾರದಿಂದ ಹತ್ತು ದಿನಗಳವರೆಗೆ ಸಹನೆ ತೋರಬೇಕು ಎಂದು ಅವರು ಕೋರಿದರು. ಕಾಳಸಂತೆ ಮಾರಾಟವನ್ನು ತಡೆಯಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೂ ಈ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande