
ಗದಗ, 12 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ ನಗರದ 16 ನೇ ವಾರ್ಡ್ನ ಹೊಂಬಳನಾಕಾ ಜನತಾ ಕಾಲೋನಿಯ ನಿವಾಸಿಗಳು ದಶಕಗಳಿಂದ ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳ ಕೊರತೆ, ರಸ್ತೆ ಮತ್ತು ರಾಜಕಾಲುವೆ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಮಾಜಮುಖಿ ಕಾರ್ಯಕರ್ತರಾದ ಕೃಷ್ಣಗೌಡ ಹೆಚ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಗದಗ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಭಾಗಗಳಲ್ಲಿ ಜನಸ್ಪಂದನಾ ಅಭಿಯಾನ ನಡೆಸುತ್ತಿರುವ ಕೃಷ್ಣಗೌಡ ಹೆಚ್. ಪಾಟೀಲ್ ಅವರು ಸಚಿವ ಹೆಚ್.ಕೆ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಲೋನಿ ನಿವಾಸಿಗಳು, ತಮ್ಮ ಬಡಾವಣೆಯ ದಶಕಗಳ ಕಷ್ಟಗಳಿಗೆ ಅವರು ಮಾತ್ರ ಪರಿಹಾರ ತರುತ್ತಾರೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ನಿವಾಸಿಗಳ ಪ್ರಕಾರ, ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಸುಮಾರು ನಾಲ್ಕು ದಶಕಗಳಿಂದ ಅನೇಕ ಮೂಲಭೂತ ಸಮಸ್ಯೆಗಳು ಬೇರೂರಿದ್ದು, ಇವುಗಳಿಗೆ ಇನ್ನೂ ಶಾಶ್ವತ ಪರಿಹಾರ ದೊರಕಿಲ್ಲ. ಮಳೆಗಾಲ ಬಂದಾಗಲೆಲ್ಲಾ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅರ್ಧಕ್ಕೆ ನಿಂತಿರುವ ರಾಜಕಾಲುವೆ ಕಾಮಗಾರಿ ಕಳೆದ ಐದಾರು ವರ್ಷಗಳಿಂದ ಮುಂದುವರಿಯದೇ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಅವರು ದೂರಿದ್ದಾರೆ.
ಮಳೆ ಬಿದ್ದಾಗ ಮನೆಗಳೊಳಗೆ ನೀರು ನುಗ್ಗುವುದರಿಂದ ಬಡವರು ಕಷ್ಟಪಟ್ಟು ದುಡಿದು ಸಂಗ್ರಹಿಸಿರುವ ಆಹಾರ ಪದಾರ್ಥಗಳು, ಜೋಳದ ಮುದ್ದೆ, ದಿನಸಿ ಸಾಮಗ್ರಿಗಳು ಮತ್ತು ಮನೆ ಬಳಕೆಯ ವಸ್ತುಗಳು ನೀರುಪಾಲಾಗುತ್ತಿವೆ. ಇದರಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಕೆಲವೊಮ್ಮೆ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ, ಕಾಲೋನಿಯ ರಸ್ತೆಗಳ ದುಸ್ಥಿತಿಯೂ ಜನರ ಬದುಕನ್ನು ಕಷ್ಟಕರವಾಗಿಸಿದೆ. ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಹಾಗೂ ಕೆಸರು ತುಂಬಿಕೊಂಡಿರುವುದರಿಂದ ವಾಹನ ಸಂಚಾರವೂ ಕಷ್ಟಕರವಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆಂಬುಲೆನ್ಸ್ ವಾಹನಗಳು ಕಾಲೋನಿಯೊಳಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆಕೆಯ ಪತಿ ಹೆಗಲ ಮೇಲೆ ಹೊತ್ತು ಮುಖ್ಯ ರಸ್ತೆಯವರೆಗೆ ಸಾಗಿಸಬೇಕಾದ ದುಃಖಕರ ಘಟನೆ ಇಲ್ಲಿ ನಡೆದಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದೇ ರೀತಿ, ಕಾಲೋನಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ದಳದ ವಾಹನಗಳು ರಸ್ತೆ ಸಮಸ್ಯೆಯಿಂದ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಸ್ಥಳೀಯ ನಿವಾಸಿಗಳೇ ಬಕೆಟ್ಗಳಲ್ಲಿ ನೀರು ತಂದು ಬೆಂಕಿ ನಂದಿಸಲು ಹರಸಾಹಸ ಪಟ್ಟ ಘಟನೆಯೂ ಇಲ್ಲಿ ನಡೆದಿದೆ.
ಈ ಭಾಗದ ರಾಜಕಾಲುವೆ ಹಾಗೂ ರಸ್ತೆ ಕಾಮಗಾರಿಗಳಿಗೆ ಸುಮಾರು 45 ಲಕ್ಷ ರೂಪಾಯಿ ಅನುದಾನ ಮೀಸಲಾಗಿದ್ದರೂ, ಕಾಮಗಾರಿಗಳು ಇನ್ನೂ ಪ್ರಾರಂಭವಾಗದೇ ಇರುವುದಕ್ಕೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದಗ–ಬೆಟಗೇರಿ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸಗಳು ಮುಂದುವರಿಯುತ್ತಿಲ್ಲ ಎಂದು ಆರೋಪಿಸಿರುವ ಅವರು, ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮಣ ಜೋಗದಂಡಕರ ಮಾರ್ಗದರ್ಶನದಲ್ಲಿದ್ದರೂ ಕಾಮಗಾರಿ ಇಂಚು ಕೂಡ ಕದಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
“ಈ ಕೆಲಸಗಳಿಗೆ ಬ್ರೇಕ್ ಹಾಕುತ್ತಿರುವ ಆ ಅಜ್ಞಾತ ಶಕ್ತಿ ಯಾವುದು? ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ವ್ಯವಸ್ಥೆಯ ಹಿಂದೆ ಯಾರ ಕೈವಾಡ ಇದೆ?” ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡದೆ ಮೌನವಾಗಿರುವುದು ಬಡವರ ಬದುಕಿನೊಂದಿಗೆ ಆಟವಾಡಿದಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣ ಎಚ್. ಹಡಪದ, ಕಾರ್ಯಾಧ್ಯಕ್ಷರಾದ ಪರಶುರಾಮ ಅಣ್ಣಿಗೇರಿ ಸೇರಿದಂತೆ ನೂರಾರು ನಿವಾಸಿಗಳು ಕೃಷ್ಣಗೌಡ ಹೆಚ್. ಪಾಟೀಲ್ ಅವರಿಗೆ ಸವಿನಯ ಮನವಿ ಮಾಡಿದ್ದಾರೆ.
“ಕೃಷ್ಣಗೌಡರೇ, ನೀವು ನಮ್ಮ ಕಾಲೋನಿಗೆ ಬಂದು ಇಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ನೋಡಿ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ಅರ್ಧಕ್ಕೆ ನಿಂತಿರುವ ರಾಜಕಾಲುವೆ ಹಾಗೂ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ನಮಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಿ” ಎಂದು ನಿವಾಸಿಗಳು ಭಾವನಾತ್ಮಕವಾಗಿ ಆಗ್ರಹಿಸಿದ್ದಾರೆ.
ಸ್ಥಳೀಯರು ತಮ್ಮ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿ ಕಾಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP