
ನವದೆಹಲಿ, 11 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಖಿಲ ಭಾರತ ಪ್ರತಿನಿಧಿ ವಾರ್ಷಿಕ ಮೂರು ದಿನಗಳ ಸಭೆ ಮಾರ್ಚ್ 13ರಿಂದ 15ರವರೆಗೆ ಹರಿಯಾಣದ ಸಮಲ್ಖಾದಲ್ಲಿ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಸಂಘದ ಪ್ರಮುಖ ಪದಾಧಿಕಾರಿಗಳು ಈಗಾಗಲೇ ಆಗಮಿಸಿದ್ದಾರೆ.
ಪ್ರತಿನಿಧಿ ಸಭೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ಸಭೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಆರ್‌ಎಸ್‌ಎಸ್ ನಾಯಕ ಪವನ್ ಜಿಂದಾಲ್ ಉಪಸ್ಥಿತರಿದ್ದರು.
ಸಭೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಭಾನುವಾರ ಸಂಜೆವರೆಗೆ ವಿವಿಧ ಅಧಿವೇಶನಗಳೊಂದಿಗೆ ನಡೆಯಲಿದೆ. ಮೊದಲ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕಳೆದ ವರ್ಷದ ಸಂಘದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆಯಲಿದ್ದಾರೆ.
ಸಭೆಯಲ್ಲಿ ಭಾರತೀಯ ಮಜ್ದೂರ್ ಸಂಘ, ವಿಶ್ವ ಹಿಂದೂ ಪರಿಷತ್, ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸೇವಿಕಾ ಸಮಿತಿ ಸೇರಿದಂತೆ ಸಂಘದಿಂದ ಪ್ರೇರಿತ 32ಕ್ಕೂ ಹೆಚ್ಚು ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕಳೆದ ವರ್ಷ ಸಂಘದ ಶತಮಾನೋತ್ಸವದ ಅಂಗವಾಗಿ ಮನೆಮನೆಗೆ ಸಂಪರ್ಕ ಅಭಿಯಾನ ಹಾಗೂ ಹಿಂದೂ ಸಮಾವೇಶಗಳನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಗಳ ಮೂಲಕ ದೇಶದಾದ್ಯಂತ 10 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಲಾಗಿದ್ದು, ಇದೇ ಅವಧಿಯಲ್ಲಿ ಸಂಘದ ಶಾಖೆಗಳ ಸಂಖ್ಯೆ ಸುಮಾರು 6,000ರಷ್ಟು ಹೆಚ್ಚಾಗಿದೆ ಎಂದು ಸುನಿಲ್ ಅಂಬೇಕರ್ ಹೇಳಿದರು.
ಇನ್ನೂ ಸಂತ ರವಿದಾಸ್ ಅವರ 650ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಶತಮಾನೋತ್ಸವದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ಗೆ ಸೇರಿ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಕಳೆದ ವರ್ಷ ಜನವರಿ–ಫೆಬ್ರವರಿ ಅವಧಿಯಲ್ಲಿ 16,192 ಮಂದಿ ಸೇರ್ಪಡೆಗಾಗಿ ವಿನಂತಿಸಿದ್ದರೆ, ಈ ವರ್ಷ 26,445 ವಿನಂತಿಗಳು ಬಂದಿವೆ.
ಈ ವರ್ಷ ಸ್ವಯಂಸೇವಕರಿಗೆ ತರಬೇತಿ ನೀಡಲು ಸಂಘವು 97 ತರಗತಿಗಳನ್ನು ಆಯೋಜಿಸುತ್ತಿದೆ. ಇದರಲ್ಲಿ 73 ತರಗತಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ವಯಂಸೇವಕರಿಗೆ ಮತ್ತು 25 ತರಗತಿಗಳು 40ರಿಂದ 65 ವರ್ಷದೊಳಗಿನವರಿಗೆ ನಡೆಸಲಾಗುತ್ತದೆ.
ಸಭೆಯ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಭೆಯ ನಿರ್ಣಯಗಳು ಮತ್ತು ಪ್ರಮುಖ ವಿಚಾರಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa