ಇರಾನ್ ಡ್ರೋನ್ ದಾಳಿ ; ಆಕಾಶದಲ್ಲೇ ಧ್ವಂಸಗೊಳಿಸಿದ ಅಮೆರಿಕ
ವಾಷಿಂಗ್ಟನ್, 04 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಸಮೀಪಕ್ಕೆ ಬರುತ್ತಿದ್ದ ಇರಾನ್ ಮೂಲದ ಡ್ರೋನ್ ಅನ್ನು ಅಮೆರಿಕ ಸೇನೆ ಆಕಾಶದಲ್ಲೇ ಹೊಡೆದುರುಳಿಸಿರುವುದಾಗಿ ಘೋಷಿಸಿದೆ. ಡ್ರೋನ್ ಹಡಗಿನ ಕಡೆಗೆ ಆಕ್ರಮಣಕಾರಿ ರೀತಿಯಲ್
ಇರಾನ್ ಡ್ರೋನ್ ದಾಳಿ ; ಆಕಾಶದಲ್ಲೇ ಧ್ವಂಸಗೊಳಿಸಿದ ಅಮೆರಿಕ


ವಾಷಿಂಗ್ಟನ್, 04 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಸಮೀಪಕ್ಕೆ ಬರುತ್ತಿದ್ದ ಇರಾನ್ ಮೂಲದ ಡ್ರೋನ್ ಅನ್ನು ಅಮೆರಿಕ ಸೇನೆ ಆಕಾಶದಲ್ಲೇ ಹೊಡೆದುರುಳಿಸಿರುವುದಾಗಿ ಘೋಷಿಸಿದೆ. ಡ್ರೋನ್ ಹಡಗಿನ ಕಡೆಗೆ ಆಕ್ರಮಣಕಾರಿ ರೀತಿಯಲ್ಲಿ ಚಲಿಸುತ್ತಿದ್ದುದರಿಂದ ಆತ್ಮರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಂ) ಸ್ಪಷ್ಟಪಡಿಸಿದೆ.

ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಅವರ ಪ್ರಕಾರ, ಅಬ್ರಹಾಂ ಲಿಂಕನ್ ನೌಕೆಯಿಂದ ಹಾರಾಟ ನಡೆಸುತ್ತಿದ್ದ ಎಫ್-35ಸಿ ಫೈಟರ್ ಜೆಟ್ ಡ್ರೋನ್ ಅನ್ನು ಗುರಿಯಾಗಿಸಿ ನಾಶಪಡಿಸಿದೆ. ಈ ಘಟನೆಯಲ್ಲಿ ಯಾವುದೇ ಅಮೆರಿಕನ್ ಸೈನಿಕರಿಗೆ ಗಾಯಗಳಾಗಿಲ್ಲ ಹಾಗೂ ಮಿಲಿಟರಿ ಉಪಕರಣಗಳಿಗೆ ಹಾನಿಯೂ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಮಾತುಕತೆಗಳ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ. ಒಪ್ಪಂದಕ್ಕೆ ಬರದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಇದಕ್ಕೆ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ವರದಿಯಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಗೆ ಸೇರಿದ ದೋಣಿಗಳು ಹಾಗೂ ಡ್ರೋನ್‌ಗಳು ಅಮೆರಿಕ ಧ್ವಜ ಹೊತ್ತ ವ್ಯಾಪಾರಿ ಹಡಗನ್ನು ಅತಿ ವೇಗದಲ್ಲಿ ಸಮೀಪಿಸಿ, ಅದನ್ನು ನಿಲ್ಲಿಸಿ ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿವೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.

ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಸೈನಿಕ ಚಟುವಟಿಕೆಗಳು ಹಾಗೂ ಉದ್ವಿಗ್ನತೆಗಳು ಮುಂಬರುವ ದಿನಗಳಲ್ಲಿ ಅಮೆರಿಕ–ಇರಾನ್ ಸಂಬಂಧಗಳನ್ನು ಇನ್ನಷ್ಟು ಸೂಕ್ಷ್ಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ರಾಜಕೀಯ ಮತ್ತು ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಎರಡೂ ರಾಷ್ಟ್ರಗಳು ಸಂವಾದದ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವ ಸಮಯದಲ್ಲಿ ಇಂತಹ ಘಟನೆಗಳು ಮಹತ್ವ ಪಡೆದುಕೊಳ್ಳುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande