ಬಹುರಾಷ್ಟ್ರೀಯ ಕಡಲ ವ್ಯಾಯಾಮ ‘ಮಿಲನ್’ ಯಶಸ್ವಿ ಮುಕ್ತಾಯ
ಅಂತಾರಾಷ್ಟ್ರೀಯ
Milan


ನವದೆಹಲಿ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಶಾಖಪಟ್ಟಣದ ಪೂರ್ವ ಕರಾವಳಿಯಲ್ಲಿ ನಡೆದ ಬಹುರಾಷ್ಟ್ರೀಯ ಕಡಲ ಸಮರಾಭ್ಯಾಸ ‘ಮಿಲನ್’ ಭಾರತೀಯ ನೌಕಾಪಡೆಯ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ನಲ್ಲಿ ಭವ್ಯ ಸಮಾರಂಭದೊಂದಿಗೆ ಮುಕ್ತಾಯವಾಯಿತು.

ಈ ವ್ಯಾಯಾಮವು ಭಾರತೀಯ ನೌಕಾಪಡೆಯ ಕಡಲ ಪರಾಕ್ರಮ, ವೃತ್ತಿಪರತೆ ಮತ್ತು 70ಕ್ಕೂ ಹೆಚ್ಚು ದೇಶಗಳೊಂದಿಗೆ ಬೆಳೆಸಿದ ಜಾಗತಿಕ ಸಹಭಾಗಿತ್ವವನ್ನು ಪ್ರತಿಬಿಂಬಿಸಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೂರ್ವ ನೌಕಾಪಡೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅಲೋಕ ಆನಂದ ವಹಿಸಿದ್ದರು. ಭಾಗವಹಿಸಿದ ಎಲ್ಲ ದೇಶಗಳ ನೌಕಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

“ಸೌಹಾರ್ದತೆ, ಸಹಕಾರ, ಸಹಯೋಗ” ಎಂಬ ಘೋಷವಾಕ್ಯದಡಿ ನಡೆದ ‘ಮಿಲನ್’ ವ್ಯಾಯಾಮದಲ್ಲಿ 42 ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು 29 ವಿಮಾನಗಳು ಭಾಗವಹಿಸಿದ್ದವು.

ಸ್ನೇಹಪರ ರಾಷ್ಟ್ರಗಳ 18 ಹಡಗುಗಳು ಸಹ ಈ ಅಭ್ಯಾಸದಲ್ಲಿ ಪಾಲ್ಗೊಂಡವು. ಫ್ರಾನ್ಸ್, ಜರ್ಮನಿ ಮತ್ತು ಅಮೆರಿಕದ ಕಡಲ ಗಸ್ತು ವಿಮಾನಗಳು ಹಾಗೂ ವಿವಿಧ ಹಡಗುಗಳಲ್ಲಿ ನಿಯೋಜಿತ ಹೆಲಿಕಾಪ್ಟರ್ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.

ವ್ಯಾಯಾಮವು ಬಂದರು ಮತ್ತು ಸಮುದ್ರ ಹಂತಗಳನ್ನು ಒಳಗೊಂಡಿತ್ತು. ಆರಂಭಿಕ ಬಂದರು ಹಂತದಲ್ಲಿ ದ್ವಿಪಕ್ಷೀಯ ಸಂವಾದಗಳು, ತಜ್ಞರ ವಿನಿಮಯ ಕಾರ್ಯಕ್ರಮಗಳು ಮತ್ತು ಅಂತಾರಾಷ್ಟ್ರೀಯ ಕಡಲ ವಿಚಾರ ಸಂಕಿರಣಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರಾಸ್-ಡೆಕ್ ಭೇಟಿಗಳು ಹಾಗೂ ಸ್ನೇಹಪರ ಕ್ರೀಡಾಕೂಟಗಳು ಪರಸ್ಪರ ಸ್ನೇಹಬಾಂಧವ್ಯ ವೃದ್ಧಿಗೆ ಸಹಕಾರಿಯಾದವು.

ಸಮುದ್ರ ಹಂತದಲ್ಲಿ ಉನ್ನತ ಮಟ್ಟದ ಯುದ್ಧಾಭ್ಯಾಸಗಳು ನಡೆದವು. ಸಮಗ್ರ ವಾಯು ರಕ್ಷಣಾ, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ, ಮೇಲ್ಮೈ ದಾಳಿ ಸಮನ್ವಯ, ಸಂವಹನ ಕವಾಯತುಗಳು, ಕ್ರಾಸ್-ಡೆಕ್ ಹಾರಾಟಗಳು ಹಾಗೂ ಲೈವ್ ಫೈರಿಂಗ್ ಅಭ್ಯಾಸಗಳು ನೆರವೇರಿದವು. ಸಮುದ್ರದಲ್ಲಿ ನೈಜ-ಸಮಯದ ಜಂಟಿ ಕಾರ್ಯಾಚರಣೆ ಯೋಜನೆ ಮತ್ತು ಸಮನ್ವಯಕ್ಕೆ ವಿಶೇಷ ಒತ್ತು ನೀಡಲಾಯಿತು.

ಸಮಾರೋಪ ವೇಳೆ ಭಾಗವಹಿಸಿದ ಹಡಗುಗಳ ಕಮಾಂಡಿಂಗ್ ಅಧಿಕಾರಿಗಳು ಭಾರತೀಯ ನೌಕಾಪಡೆಯ ವೃತ್ತಿಪರತೆ ಮತ್ತು ಸಮಗ್ರ ಯೋಜನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ‘ಮಿಲನ್’ ತನ್ನ ತರಬೇತಿ ಮತ್ತು ಕಾರ್ಯಾಚರಣಾ ಗುರಿಗಳನ್ನು ಸಂಪೂರ್ಣ ಸಾಧಿಸಿದ್ದು, ಪರಸ್ಪರ ಕಾರ್ಯಸಾಧ್ಯತೆ ಮತ್ತು ಸಾಮೂಹಿಕ ಕಡಲ ಸಿದ್ಧತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.

ಬಹುರಾಷ್ಟ್ರೀಯ ಕಡಲ ವ್ಯಾಯಾಮ ‘ಮಿಲನ್’ ಯಶಸ್ವಿ ಮುಕ್ತಾಯವು ಸುರಕ್ಷಿತ ಸಮುದ್ರಗಳಿಗಾಗಿ ಸಹಕಾರ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಹಾಗೂ ದೀರ್ಘಕಾಲೀನ ಜಾಗತಿಕ ಪಾಲುದಾರಿಕೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande