
ಹುಬ್ಬಳ್ಳಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೇಶೀಯ ಕ್ರಿಕೆಟ್ನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾದ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಎಂಟು ಬಾರಿ ಕಿರೀಟ ಮುಡಿಗೇರಿಸಿರುವ ಕರ್ನಾಟಕ ಕ್ರಿಕೆಟ್ ತಂಡ ಹಾಗೂ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡಗಳ ನಡುವೆ ಕಣಕ್ಕಿಳಿಯುವ ಪ್ರಶಸ್ತಿ ಸಮರ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.
ಹುಬ್ಬಳ್ಳಿಯ ರಾಜನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಉತ್ತರ ಕರ್ನಾಟಕದ ಅಭಿಮಾನಿಗಳಿಗೆ ಇದು ಅಪರೂಪದ ಸುವರ್ಣಾವಕಾಶವಾಗಿದೆ. ಮೊದಲ ಬಾರಿಗೆ ರಣಜಿ ಫೈನಲ್ ಆತಿಥ್ಯ ವಹಿಸುತ್ತಿರುವ ಹುಬ್ಬಳ್ಳಿ ನಗರ ಈಗ ಕ್ರಿಕೆಟ್ ಸಂಭ್ರಮದಲ್ಲಿ ತೇಲುತ್ತಿದೆ.
ಅನುಭವದ ಬಲದೊಂದಿಗೆ ಕರ್ನಾಟಕ
ದೇವದತ್ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡ ಅನುಭವ ಹಾಗೂ ತಾರಾಬಲದ ಸಮನ್ವಯದಿಂದ ಕಣಕ್ಕಿಳಿಯುತ್ತಿದೆ. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್ ಮೊದಲಾದ ಅಂತಾರಾಷ್ಟ್ರೀಯ ಅನುಭವ ಹೊಂದಿದ ಆಟಗಾರರು ತಂಡಕ್ಕೆ ಬಲ ನೀಡಲಿದ್ದಾರೆ. ಬೌಲಿಂಗ್ ದಾಳಿಯಲ್ಲಿ ಪ್ರಸಿದ್ಧ್ ಕೃಷ್ಣ, ವಿಜಯ್ ಕುಮಾರ್ ವೈಶಾಕ್ ಹಾಗೂ ವಿದ್ವತ್ ಕಾವೇರಪ್ಪ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಸಮತೋಲನದ ಬಳಗ ಹೊಂದಿರುವ ಕರ್ನಾಟಕ ಪ್ರಶಸ್ತಿ ಗೆಲುವಿನತ್ತ ವಿಶ್ವಾಸದಿಂದ ಹೆಜ್ಜೆ ಇಡುತ್ತಿದೆ.
ಇತಿಹಾಸ ರಚನೆಗೆ ಜಮ್ಮು-ಕಾಶ್ಮೀರ
ಪರಾಸ್ ಡೋಗ್ರಾ ನಾಯಕತ್ವದ ಜಮ್ಮು-ಕಾಶ್ಮೀರ ತಂಡ ಈ ಸೀಸನ್ನಲ್ಲಿ ಅದ್ಭುತ ಹೋರಾಟ ಪ್ರದರ್ಶಿಸಿದೆ. ಅಬ್ದುಲ್ ಸಮದ್, ಕಮ್ರಾನ್ ಇಕ್ಬಾಲ್, ಅಬಿದ್ ಮುಷ್ತಾಕ್ ಹಾಗೂ ಉಸ್ಮಾನ್ ಮಲಿಕ್ ಅವರಂತಹ ಪ್ರತಿಭಾವಂತ ಆಟಗಾರರು ತಂಡದ ಶಕ್ತಿ. ಬೌಲಿಂಗ್ ದಾಳಿ ಮತ್ತು ಒಗ್ಗಟ್ಟಿನ ಆಟದಿಂದ ಫೈನಲ್ ತಲುಪಿರುವ ಈ ತಂಡ, ಕರ್ನಾಟಕಕ್ಕೆ ಕಠಿಣ ಸವಾಲು ಎಸೆಯಲು ಸಜ್ಜಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa