ಶಿರಸಿ ಮಾರಿಕಾಂಬಾ ಜಾತ್ರೆಗೆ ಪೋಲಿಸ್ ಇಲಾಖೆ ಸರ್ವ ಸಿದ್ದತೆ
ಶಿರಸಿ, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಫೆಬ್ರುವರಿ 24 ರಿಂದ ಆರಂಭವಾಗಲಿರುವ ಪ್ರಸಿದ್ಧ ''ಶಿರಸಿ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ''ದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಸರ್ವಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವ
Police


ಶಿರಸಿ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಫೆಬ್ರುವರಿ 24 ರಿಂದ ಆರಂಭವಾಗಲಿರುವ ಪ್ರಸಿದ್ಧ 'ಶಿರಸಿ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ'ದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಸರ್ವಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದ್ದಾರೆ.

ಶಿರಸಿಯ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ಭದ್ರತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ಬಂದೋಬಸ್ತ್ ಕರ್ತವ್ಯಕ್ಕಾಗಿ ಅತಿ ದೊಡ್ಡ ಪೊಲೀಸ್ ಪಡೆಯನ್ನೇ ನಿಯೋಜಿಸಲಾಗಿದೆ. ಭದ್ರತೆಗಾಗಿ 3 ಡಿವೈಎಸ್ಪಿ, 10 ಸಿಪಿಐ, 47 ಪಿಎಸ್ಐ, 110 ಎಎಸ್ಐ, 754 ಪೊಲೀಸ್ ಪೇದೆಗಳು ಹಾಗೂ 200 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

25 ಕಡೆಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ:

ಜಾತ್ರೆಗೆ ಬರುವ ಭಕ್ತಾದಿಗಳ ವಾಹನಗಳ ದಟ್ಟಣೆ ನಿಯಂತ್ರಿಸಲು ನಗರದಾದ್ಯಂತ 25 ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಮಂಗಳೂರು, ಭಟ್ಕಳ, ಕುಮಟಾ, ಸಾಗರ ಹಾಗೂ ಸಿದ್ದಾಪುರ ಕಡೆಯಿಂದ ಬರುವ ವಾಹನಗಳಿಗೆ ನಗರದ ಹೊರವಲಯದ 7 ಪ್ರಮುಖ ಸ್ಥಳಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಡಿಜಿಟಲ್ ಯುಗಕ್ಕೆ ತಕ್ಕಂತೆ ಹೆಜ್ಜೆ ಇಟ್ಟಿರುವ ಪೊಲೀಸ್ ಇಲಾಖೆ, ಜಾತ್ರೆಗೆ ಬರುವ ಸಾರ್ವಜನಿಕರಿಗೆ ರಸ್ತೆ ಸಂಚಾರ, ಪಾರ್ಕಿಂಗ್ ಪ್ರದೇಶಗಳು ಮತ್ತು ಜಾತ್ರೆಯ ಸಂಪೂರ್ಣ ಮಾಹಿತಿ ನೀಡಲು www.sirsipolice.in ಎಂಬ ವಿಶೇಷ ವೆಬ್ಸೈಟ್ ಸಿದ್ಧಪಡಿಸಿ ಬಿಡುಗಡೆಗೊಳಿಸಿದೆ. ಭಕ್ತಾದಿಗಳು ತಮ್ಮ ಮೊಬೈಲ್ನಲ್ಲೇ ಈ ವೆಬ್ಸೈಟ್ ಮೂಲಕ ಅಗತ್ಯ ಮಾಹಿತಿ ಪಡೆದುಕೊಂಡು, ಇದರ ಸದುಪಯೋಗ ಮಾಡಿಕೊಳ್ಳುವಂತೆ ಎಸ್ಪಿ ದೀಪನ್ ಮನವಿ ಮಾಡಿದ್ದಾರೆ.

ಜಾತ್ರೆಯ ಜನಸಂದಣಿ ಪ್ರದೇಶಗಳಲ್ಲಿ ನಡೆಯಬಹುದಾದ ಸರಗಳ್ಳತನ, ಕಳ್ಳತನ ಹಾಗೂ ಇತರ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ವಾಚ್ ಟವರ್ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಜಿಲ್ಲಾ ಮತ್ತು ಅಂತರ ಜಿಲ್ಲಾ ಅಪರಾಧ ಪತ್ತೆ ದಳದ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಾರ್ವಜನಿಕರ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಸಿಸಿಟಿವಿ ಮತ್ತು ಮಫ್ತಿ ಪೊಲೀಸರ ಮೂಲಕ ನಿರಂತರ ನಿಗಾ ಇರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande