ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಭೂಪೇನ್ ಬೋರಾ
ವಿದ್ಯಮಾನಗಳು
Bora


ಗುವಾಹಟಿ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಸ್ಸಾಂ ರಾಜಕೀಯದಲ್ಲಿ ಮಹತ್ವದ ವಿದ್ಯಮಾನಗಳಲ್ಲಿ, ಭೂಪೇನ್ ಬೋರಾ ಅವರು ಭಾನುವಾರ ಔಪಚಾರಿಕವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಸೇರ್ಪಡೆಗೊಂಡರು. ಈ ಮೂಲಕ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ)ಗೆ ದೊಡ್ಡ ಹಿನ್ನಡೆ ಉಂಟಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ದಿಲೀಪ್ ಸೈಕಿಯಾ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೋರಾ ಬಿಜೆಪಿ ಧ್ವಜ ಸ್ವೀಕರಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಅಟಲ್ ಬಿಹಾರಿ ವಾಜಪೇಯಿ ಭವನಕ್ಕೆ ಆಗಮಿಸಿದ ವೇಳೆ ಸಚಿವ ಜಯಂತ ಮಲ್ಲ ಬರುವಾ, ಸಂಸದ ಪ್ರದಾನ್ ಬರುವಾ ಸೇರಿದಂತೆ ಹಲವಾರು ಹಿರಿಯ ನಾಯಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಬಿಜೆಪಿಗೆ ಸೇರ್ಪಡೆಯ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಬೋರಾ, “ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನನ್ನ ಬಟ್ಟೆಗಳು ರಕ್ತದಿಂದ ಕೂಡಿದ್ದವು. ಆ ರಕ್ತವು ಬಿಜೆಪಿಯೊಂದಿಗಿನ ಸಂಘರ್ಷದಿಂದ ಚೆಲ್ಲಲ್ಪಟ್ಟದ್ದು. ಬಿಜೆಪಿ ಆ ತ್ಯಾಗವನ್ನು ಮೌಲ್ಯಮಾಪನ ಮಾಡುತ್ತದೆ ಎಂಬ ವಿಶ್ವಾಸದೊಂದಿಗೆ ನಾನು ಇಲ್ಲಿ ಬಂದಿದ್ದೇನೆ” ಎಂದು ಭಾವುಕವಾಗಿ ಹೇಳಿದರು. ಮಹಾಭಾರತದ ಕರ್ಣನ ಉದಾಹರಣೆ ನೀಡುತ್ತಾ, ಅಸ್ಸಾಮಿ ಜನರ ಪರಿಸ್ಥಿತಿಯನ್ನು ವಿವರಿಸಿದರು.

ಗಮನಾರ್ಹವಾಗಿ, ಕಳೆದ ಶನಿವಾರವೇ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿರ್ಧಾರವನ್ನು ಘೋಷಿಸಿದ್ದರು. “ಈ ನಿರ್ಧಾರ ಸುಲಭವಲ್ಲ. ಆದರೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಬಲವಾದ ಸಂಕಲ್ಪದಿಂದ ತೆಗೆದುಕೊಂಡ ಹೆಜ್ಜೆ” ಎಂದು ಅವರು ಹೇಳಿದ್ದರು.

ಭೂಪೇನ್ ಬೋರಾ ತಮ್ಮ ರಾಜಕೀಯ ಬದುಕನ್ನು ಅಸ್ಸಾಂ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಾರಂಭಿಸಿದರು. 2006ರಲ್ಲಿ ಬಿಹ್ಪುರಿಯಾ ಕ್ಷೇತ್ರದಿಂದ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾಗಿದ್ದು, 2011ರಲ್ಲಿ ಮರು ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಅವಧಿಯಲ್ಲಿ ಸರ್ಕಾರದ ವಕ್ತಾರ ಹಾಗೂ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2013ರಲ್ಲಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 2021ರಲ್ಲಿ ಎಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿದ್ದರು.

ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಈ ರಾಜಕೀಯ ಬದಲಾವಣೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ಕಾಂಗ್ರೆಸ್ ಪಕ್ಷವು “ಬೋರಾ ಅವರ ನಿರ್ಗಮನದಿಂದ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಹೇಳುತ್ತಿದ್ದರೂ, ಈಗಾಗಲೇ ಸಂಘಟನಾ ಮಟ್ಟದಲ್ಲಿ ದುರ್ಬಲಗೊಂಡಿರುವ ಪಕ್ಷಕ್ಕೆ ಇದು ಇನ್ನಷ್ಟು ಸವಾಲು ತರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ನಡುವೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಇನ್ನೂ ಅನೇಕ ಹಿರಿಯ ನಾಯಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಬೋರಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಡಾ. ಸಂಜು ಬರುವಾ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande