
ಮುಂಬಯಿ, 11 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ಬುಧವಾರ ಸುಗಮವಾಗಿ ನೆರವೇರಿತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯೆ ರಿತು ತಾವ್ಡೆ ಅವರು ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಶಿವಸೇನೆ (ಶಿಂಧೆ ಬಣ) ಸದಸ್ಯ ಸಂಜಯ್ ಘಾಡಿ ಉಪಮೇಯರ್ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು.
ಬಿಎಂಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಆಯುಕ್ತ ಭೂಷಣ್ ಗಗ್ರಾನಿ ಈ ಘೋಷಣೆ ಮಾಡಿದರು. ರಿತು ತಾವ್ಡೆ ಅವರೇ ಮೇಯರ್ ಹುದ್ದೆಗೆ ಏಕೈಕ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇದೇ ರೀತಿ, ಉಪಮೇಯರ್ ಹುದ್ದೆಗೆ ಸಂಜಯ್ ಘಾಡಿ ಅವರೇ ಏಕೈಕ ಅಭ್ಯರ್ಥಿಯಾಗಿದ್ದು, ಅವರನ್ನು ಸಹ ಅವಿರೋಧವಾಗಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ನೂತನ ಮೇಯರ್ ಮತ್ತು ಉಪಮೇಯರ್ ಅವರಿಗೆ ಮುಖ್ಯಮಂತ್ರಿ ಫಡ್ನವೀಸ್ ಅಭಿನಂದನೆ ಸಲ್ಲಿಸಿದರು. ರಿತು ತಾವ್ಡೆ ಹಾಗೂ ಸಂಜಯ್ ಘಾಡಿ ಅವರು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರವು ಬಿಎಂಸಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa