
ನವದೆಹಲಿ, 11 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶ್ರೀಲಂಕಾದಲ್ಲಿ ನಡೆದ ಐತಿಹಾಸಿಕ ಸಾರ್ವಜನಿಕ ಪ್ರದರ್ಶನದ ನಂತರ ಭಗವಾನ್ ಬುದ್ಧನ ಪವಿತ್ರ ದೇವ್ನಿಮೋರಿ ಅವಶೇಷಗಳನ್ನು ಭಾರತಕ್ಕೆ ಯಶಸ್ವಿಯಾಗಿ ಹಿಂತಿರುಗಿಸಲಾಗಿದೆ.
ಕೊಲಂಬೊದ ಐತಿಹಾಸಿಕ ಗಂಗಾರಾಮಯ ದೇವಾಲಯದಲ್ಲಿ ವಾರಪೂರ್ತಿ ನಡೆದ ಪ್ರದರ್ಶನದಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡರು.
ಕೇಂದ್ರ ಸಂಸ್ಕೃತಿ ಸಚಿವಾಲಯದ ಮಾಹಿತಿಯಂತೆ, ಪವಿತ್ರ ಅವಶೇಷಗಳನ್ನು ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಕಳುಹಿಸಲಾಗಿತ್ತು.
ಮಧ್ಯ ಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್ ಹಾಗೂ ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇನ್ ಅವರ ನೇತೃತ್ವದ ಉನ್ನತ ಮಟ್ಟದ ಭಾರತೀಯ ಪ್ರತಿನಿಧಿ ಮಂಡಳಿ ಶ್ರೀಲಂಕಾಕ್ಕೆ ತೆರಳಿ ಅವಶೇಷಗಳನ್ನು ಭಾರತಕ್ಕೆ ಮರಳಿ ತಂದಿತು. ಹಿರಿಯ ಬೌದ್ಧ ಭಿಕ್ಷುಗಳು ಹಾಗೂ ಅಧಿಕಾರಿಗಳು ಸಹ ಅವರೊಂದಿಗೆ ಪ್ರಯಾಣಿಸಿದರು.
ಅವಶೇಷಗಳ ಔಪಚಾರಿಕ ನಿರ್ಗಮನ ಸಮಾರಂಭವು ಕೊಲಂಬೊದ ಬಂಡರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಲಂಕಾದ ಸಚಿವರು ಮತ್ತು ಭಾರತ ಹೈಕಮಿಷನರ್ ಉಪಸ್ಥಿತರಿದ್ದರು.
ಏಳು ದಿನಗಳ ಪ್ರದರ್ಶನದ ಅವಧಿಯಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಯಾತ್ರಿಕರು ಪವಿತ್ರ ಅವಶೇಷಗಳಿಗೆ ಗೌರವ ಸಲ್ಲಿಸಿದರು. ಶ್ರೀಲಂಕಾದ ಪ್ರಧಾನ ಮಂತ್ರಿ, ಕ್ಯಾಬಿನೆಟ್ ಸಚಿವರು, ಸಂಸತ್ ಸದಸ್ಯರು, ಮಾಜಿ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದುಕೊಂಡರು.
ಈ ಐತಿಹಾಸಿಕ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ನೆರವಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜನತೆಗೆ ಶ್ರೀಲಂಕಾ ನಾಯಕತ್ವ ಕೃತಜ್ಞತೆಗಳನ್ನು ವ್ಯಕ್ತಪಡಿಸಿದೆ.
ಭಾರತದ ಪರವಾಗಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಗೂ ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2025ರಲ್ಲಿ ಶ್ರೀಲಂಕಾ ಭೇಟಿಯ ಸಂದರ್ಭದಲ್ಲಿ ಈ ವಿಶೇಷ ಪ್ರದರ್ಶನದ ಘೋಷಣೆ ಮಾಡಿದ್ದರು.
ಈ ಕಾರ್ಯಕ್ರಮವು ಭಾರತ–ಶ್ರೀಲಂಕಾ ನಡುವಿನ ಶತಮಾನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಿದೆ. ಜಾಗತಿಕ ಬೌದ್ಧ ಪರಂಪರೆಯ ಸಂರಕ್ಷಕನಾಗಿ ಭಾರತದ ಪಾತ್ರವನ್ನು ಇದು ಮತ್ತೊಮ್ಮೆ ಪ್ರತಿಪಾದಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa