ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಮುನಿಸು ಅಥವಾ ಭಿನ್ನಾಭಿಪ್ರಾಯವಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮೇಖ್ರಿ ವೃತ್ತದ ಬಳಿ ಸುರಂಗ ಮಾರ್ಗ ಮತ್ತು ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.
dk-shivakumar-says-no-differences-with-siddaramaiah-clarifies-bengaluru-tunnel-road-project


ಬೆಂಗಳೂರು, 09 ನವೆಂಬರ್ (ಹಿ.ಸ.):

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಥವಾ ಮುನಿಸು ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೆಲವರು ತಮ್ಮಿಬ್ಬರ ನಡುವೆ ಮುನಿಸಿದೆ ಎಂಬ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಖ್ರಿ ವೃತ್ತ ಹಾಗೂ ಟೌನ್ ಹಾಲ್ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೊಂದಿಗಿನ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಅವರಿಗೂ ನನಗೂ ದೊಡ್ಡ ಮುನಿಸೂ ಇಲ್ಲ, ಸಣ್ಣ ಮುನಿಸೂ ಇಲ್ಲ.

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಕೆಲವರು ಮಾಧ್ಯಮಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂಬಂತೆ ವಿಭಿನ್ನವಾಗಿ ಬಿಂಬಿಸುತ್ತಿದ್ದಾರೆ. ಈ ವಿಚಾರವಾಗಿ ಅವರಿಗೆ ತಿಳಿಸಬೇಕಾದ ವಿಷಯಗಳನ್ನು ಈಗಾಗಲೇ ತಿಳಿಸಿದ್ದೇವೆ” ಎಂದರು.

“ರಾಜಕಾರಣದಲ್ಲಿ ನಿಂದಕರು ಮತ್ತು ವಿರೋಧಿಗಳು ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂತಹವರು ಶುದ್ಧ ರಾಜಕಾರಣ ಮಾಡಲು ಸಾಧ್ಯ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಬೇಕಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿದ್ದೇನೆ” ಎಂದು ತಿಳಿಸಿದರು.

ಸುರಂಗ ಮಾರ್ಗ, ಎಲಿವೇಟೆಡ್ ಕಾರಿಡಾರ್ಗೆ ವಿರೋಧ ಸಲ್ಲ

ಮೇಖ್ರಿ ವೃತ್ತದ ಬಳಿ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಹಾಗೂ ಸುರಂಗ ಮಾರ್ಗದ ಯೋಜನೆ ಕುರಿತು ಮಾತನಾಡಿದ ಶಿವಕುಮಾರ್, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸುವುದು ಅನಿವಾರ್ಯ ಎಂದರು.

“ನಾವು ಸುರಂಗ ರಸ್ತೆ ನಿರ್ಮಿಸಿದರೂ ಪ್ರತಿಪಕ್ಷಗಳಿಗೆ ಆಕ್ಷೇಪ, ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ಆಕ್ಷೇಪ. ಅವರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆಯನ್ನು ಮೇಲ್ಭಾಗದಲ್ಲಿ ನಿರ್ಮಿಸಬೇಕು ಅಥವಾ ಭೂಮಿಯೊಳಗೆ ಸುರಂಗ ಮಾರ್ಗ ಕಲ್ಪಿಸಬೇಕು. ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆ ಅಗಲೀಕರಣಕ್ಕಾಗಿ ರಕ್ಷಣಾ ಇಲಾಖೆಯ ಜಾಗವನ್ನು ಕೋರಲಾಗಿದೆ. ಈಗಾಗಲೇ ರಕ್ಷಣಾ ಸಚಿವರ ಬಳಿ ಮೇಖ್ರಿ ವೃತ್ತದ ಸಮೀಪದ ಜಾಗವನ್ನು ನೀಡುವಂತೆ ಮನವಿ ಮಾಡಲಾಗಿದೆ. ಆ ಜಾಗ ದೊರೆತರೆ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದರು.

ಒಂದು ವೃತ್ತದ ಸುತ್ತ ಮತ್ತೊಂದು ವೃತ್ತದ ಮಾದರಿಯಲ್ಲಿ ರೋಟರಿ ಸರ್ಕಲ್ ಹಾಗೂ ರಿಂಗ್ ವ್ಯವಸ್ಥೆ ರೂಪಿಸುವ ಉದ್ದೇಶವಿದೆ. ಎಡಕ್ಕೆ ಹೋಗುವವರು ಎಡಕ್ಕೆ, ಬಲಕ್ಕೆ ಹೋಗುವವರು ಬಲಕ್ಕೆ ಸಾಗುವಂತೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಅಗತ್ಯವಿರುವ ಕಡೆ ಸುರಂಗ ಮಾರ್ಗವನ್ನೂ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಕಾಮಗಾರಿ ವೇಳೆ ಸಂಚಾರ ಸಂಪೂರ್ಣ ಬಂದ್ ಇಲ್ಲ

ಯೋಜನೆಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಚಾರ ಪೊಲೀಸರು ಈಗಾಗಲೇ ಯೋಜನೆಯನ್ನು ಪರಿಶೀಲಿಸಿದ್ದಾರೆ.

ಬಿಡಿಎ ಅಧ್ಯಕ್ಷರೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಾವೂ ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ಹೆಚ್ಚಾಗುವ ಪ್ರದೇಶಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

“ಕಾಮಗಾರಿ ವೇಳೆ ಕೆಲವು ದೊಡ್ಡ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಉಳಿದ ವಾಹನಗಳ ಸಂಚಾರಕ್ಕೆ ಯಾವುದೇ ಸಂಪೂರ್ಣ ನಿರ್ಬಂಧ ಇರುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 9 ಕೋಟಿ ರೂ. ವೆಚ್ಚವಾಗಲಿದ್ದು, ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಬಿಡಿಎ ಸಿದ್ಧತೆ ನಡೆಸುತ್ತಿದೆ” ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ವಿರೋಧ ಮಾಡುವವರನ್ನು ಒಪ್ಪಿಸುವ ಅಗತ್ಯವಿಲ್ಲ. ನಾನು ಏನೇ ಮಾಡಿದರೂ ವಿರೋಧಿಸಬೇಕು ಎಂದು ಕೆಲವರು ನಿರ್ಧರಿಸಿದಂತಿದೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಕೆಲಸಗಳನ್ನು ಮಾಡಿದ್ದಾರೆಯೇ? ಜೆಡಿಎಸ್ನವರು ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆಯೇ? ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ವಿರೋಧಿಸಬೇಕು ಎಂಬ ಮನೋಭಾವ ಕೆಲವರಲ್ಲಿದೆ” ಎಂದು ಟೀಕಿಸಿದರು.

16 ಕಿ.ಮೀ. ಸುರಂಗ ಮಾರ್ಗವಲ್ಲ

ಇತ್ತೀಚೆಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುವಾಗ ಸುರಂಗ ಮಾರ್ಗದ ಯೋಜನೆಗೆ ಸಂಬಂಧಿಸಿದ ಸ್ಥಳವನ್ನು ಪರಿಶೀಲಿಸಿರುವುದಾಗಿ ತಿಳಿಸಿದ ಶಿವಕುಮಾರ್, ಲಾಲ್ಬಾಗ್ ಸಮೀಪ ಸುರಂಗ ಮಾರ್ಗ ಹಾದುಹೋಗುವ ಪ್ರದೇಶದಲ್ಲಿ ಭೂಮಿಯ ಸ್ವರೂಪ ವಿಭಿನ್ನವಾಗಿದೆ.

ಬಂಡೆ ಇರುವ ಸ್ಥಳ ಹಾಗೂ ಸುರಂಗ ಹೊರಬರುವ ಸ್ಥಳದ ನಡುವೆ ವ್ಯತ್ಯಾಸವಿದೆ. ಹೀಗಾಗಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈಗಾಗಲೇ ನಿರ್ಮಾಣವಾಗಿರುವ ಎಲಿವೇಟೆಡ್ ಕಾರಿಡಾರ್ಗೆ ಹೊಸ ಯೋಜನೆಯನ್ನು ಜೋಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, “ಇದು ಪ್ರತ್ಯೇಕ ಯೋಜನೆಯಾಗಿರುತ್ತದೆ.

ಎರಡೂ ಯೋಜನೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ. ಸುರಂಗ ಮಾರ್ಗದಿಂದ ಹೊರಬಂದು ಎಲಿವೇಟೆಡ್ ರಸ್ತೆಯ ಮೂಲಕ ಮುಂದುವರಿಯುವ ವ್ಯವಸ್ಥೆ ಇರಲಿದೆ.

ಆದರೆ ಇದು 16 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವಲ್ಲ. ಈಗ ಪ್ರಸ್ತಾಪಿಸಿರುವುದು ಸಣ್ಣ ಸುರಂಗ ಮಾರ್ಗ” ಎಂದು ಸ್ಪಷ್ಟಪಡಿಸಿದರು.

ಹೆಬ್ಬಾಳ ಭಾಗದಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಣ್ಣ ಸುರಂಗ ಮಾರ್ಗದ ಯೋಜನೆ ರೂಪಿಸಲಾಗುತ್ತಿದೆ.

ಒಂದು ಪ್ರದೇಶದಲ್ಲಿ ಸಂಚಾರ ಸುಗಮಗೊಳಿಸಿದ ಬಳಿಕ ಮುಂದಿನ ಭಾಗದಲ್ಲಿ ಮತ್ತೆ ವಾಹನ ದಟ್ಟಣೆ ಉಂಟಾಗದಂತೆ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

“ವಿರೋಧ ಪಕ್ಷಗಳ ಕೆಲಸವೇ ವಿರೋಧ ಮಾಡುವುದಾಗಿದೆ ಎಂಬಂತಾಗಿದೆ. ಅಭಿವೃದ್ಧಿಗೂ ವಿರೋಧ, ಪ್ರತಿಯೊಂದು ಕೆಲಸಕ್ಕೂ ವಿರೋಧ. ನಮ್ಮ ಸರ್ಕಾರದ ಅಭಿವೃದ್ಧಿಯ ವೇಗವನ್ನು ಪ್ರತಿಪಕ್ಷಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande