ಸಮಾಜದಲ್ಲಿ ತುಳಿತಕ್ಕೆ ಒಳಗಾದ ವರ್ಗಗಳಿಗೆ ಉಚಿತ ಕಾನೂನು ಸೇವೆ:ನ್ಯಾ. ಪ್ರಭು ನೀಲಚಾರಿ ಬಡಿಗೇರ್
ಸಮಾಜದಲ್ಲಿ ತುಳಿತಕ್ಕೆ ಒಳಗಾದ ವರ್ಗಗಳ ಉಚಿತ ಕಾನೂನು ಸೇವೆ
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ನೀಲಚಾರಿ ಬಡಿಗೇರ್


ಕೋಲಾರ, 09 ನವೆಂಬರ್ (ಹಿ.ಸ.)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ನ್ಯಾಯ ಸಿಗಬೇಕು; ಆದರೆ ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ ಹಾಗೂ ಕಾನೂನಿನ ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರು ನ್ಯಾಯಾಲಯದ ಕದ ತಟ್ಟಲು ಹಿಂಜರಿಯಬಾರದು ಎಂಬ ಉದ್ದೇಶದಿಂದ ಉಚಿತ ಕಾನೂನು ನೆರವು ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ನೀಲಚಾರಿ ಬಡಿಗೇರ್ ತಿಳಿಸಿದರು.

ನವೆಂಬರ್ ೯ರ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನ’ದ ಹಿನ್ನೆಲೆಯಲ್ಲಿ ಕೋಲಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ವಿವರವಾದ ಮಾಹಿತಿ ಹಂಚಿಕೊಂಡ ಅವರು, ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ರಕ್ಷಣೆ ತಲುಪಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ನ್ಯಾಯಾಂಗ ವ್ಯವಸ್ಥೆಯು ಕೇವಲ ಉಳ್ಳವರ ಸ್ವತ್ತಾಗಬಾರದು ಎಂದು ಒತ್ತಿಹೇಳಿದ ನ್ಯಾ. ಪ್ರಭು ನೀಲಚಾರಿ ಬಡಿಗೇರ್ ಅವರು, “ಭಾರತೀಯ ಸಂವಿಧಾನದ ೩೯ನೇ (ಎ) ವಿಧಿಯು ಆರ್ಥಿಕ ಅಥವಾ ಯಾವುದೇ ಅಸಮರ್ಥತೆಯ ಕಾರಣಕ್ಕಾಗಿ ಯಾವೊಬ್ಬ ನಾಗರಿಕನಿಗೂ ನ್ಯಾಯ ನಿರಾಕರಿಸಬಾರದು ಎಂದು ಸ್ಪಷ್ಟವಾಗಿ ನಿರ್ದೇಶಿಸುತ್ತದೆ. ಸಮಾನ ಅವಕಾಶಗಳ ಆಧಾರದ ಮೇಲೆ ಸಮಾಜದ ದುರ್ಬಲರಿಗೆ ಉಚಿತ ಕಾನೂನು ನೆರವು ನೀಡುವುದು ಕಲ್ಯಾಣ ಸರ್ಕಾರದ ಸಂವಿಧಾನಬದ್ಧ ಹೊಣೆಗಾರಿಕೆಯಾಗಿದೆ” ಎಂದು ವಿವರಿಸಿದರು.

ಈ ಯೋಜನೆಯ ಐತಿಹಾಸಿಕ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ಸ್ವಾತಂತ್ರ್ಯಾನಂತರ ೧೯೫೦ರಿಂದಲೇ ಕೇಂದ್ರ ಕಾನೂನು ಸಚಿವರ ಸಮ್ಮೇಳನಗಳು ಹಾಗೂ ಭಾರತೀಯ ಕಾನೂನು ಆಯೋಗದ ವರದಿಗಳಲ್ಲಿ ಬಡವರಿಗೆ ಕಾನೂನು ನೆರವು ನೀಡುವ ಕುರಿತು ನಿರಂತರ ಚರ್ಚೆಗಳು ನಡೆದವು. ೧೯೬೦ರ ದಶಕದಲ್ಲಿ ಹಲವು ಮಾರ್ಗಸೂಚಿಗಳು ರಚನೆಯಾದವು. ಬಳಿಕ ೧೯೮೦ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ಭಗವತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ದೇಶಾದ್ಯಂತ ಏಕರೂಪದ ಶಾಸನಾತ್ಮಕ ಚೌಕಟ್ಟು ರೂಪಿಸಲು ೧೯೮೭ರಲ್ಲಿ ‘ಲೀಗಲ್ ಸರ್ವಿಸಸ್ ಅಥಾರಿಟೀಸ್ ಆಕ್ಟ್’ (ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ) ಸಂಸತ್ತಿನಲ್ಲಿ ಅಂಗೀಕಾರವಾಯಿತು. ಈ ಮಹತ್ವದ ಕಾಯ್ದೆಯು ೧೯೯೫ರ ನವೆಂಬರ್ ೯ರಂದು ಅಧಿಕೃತವಾಗಿ ಜಾರಿಗೆ ಬಂದಿದ್ದರಿಂದ, ಪ್ರತಿವರ್ಷ ನವೆಂಬರ್ ೯ರ ದಿನವನ್ನು ‘ರಾಷ್ಟ್ರೀಯ ಕಾನೂನು ಸೇವೆಗಳ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾನೂನು ನೆರವು ವ್ಯವಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ.

ಕೋಲಾರ ಜಿಲ್ಲೆಯಲ್ಲಿ ಇದರ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಸದಸ್ಯ ಕಾರ್ಯದರ್ಶಿಗಳು, “ಕೋಲಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ’ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಕೆ.ಜಿ.ಎಫ್. (ರಾಬರ್ಟ್ಸನ್ಪೇಟೆ) ತಾಲೂಕುಗಳ ನ್ಯಾಯಾಲಯ ಸಂಕೀರ್ಣಗಳಲ್ಲಿ ‘ತಾಲೂಕು ಕಾನೂನು ಸೇವೆಗಳ ಸಮಿತಿ’ಗಳು ಕಾರ್ಯಾಚರಿಸುತ್ತಿವೆ. ಈ ಮೂಲಕ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅವರವರ ತಾಲೂಕು ಕೇಂದ್ರಗಳಲ್ಲೇ ತ್ವರಿತ ಕಾನೂನು ಸೇವೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಆರೋಪಿಗಳಿಗೆ ಸಮರ್ಥ ಮತ್ತು ಗುಣಮಟ್ಟದ ರಕ್ಷಣೆ ಒದಗಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಸಿಸ್ಟಮ್’ ವ್ಯವಸ್ಥೆ ಕೋಲಾರದಲ್ಲೂ ಸಕ್ರಿಯವಾಗಿದೆ. ದೇಶದ ೬೮೦ ಜಿಲ್ಲೆಗಳಲ್ಲಿರುವಂತೆಯೇ, ಇಲ್ಲೂ ಸಮರ್ಪಿತ ರಕ್ಷಣಾ ವಕೀಲರ ತಂಡವು ಬಡ ವಿಚಾರಣಾಧೀನ ಕೈದಿಗಳ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದೆ.

ಪ್ರಾಧಿಕಾರದ ಪ್ರಮುಖ ಕಾರ್ಯಗಳಲ್ಲಿ ಒಂದಾದ ಲೋಕ ಅದಾಲತ್ ಕುರಿತು ಮಾತನಾಡಿದ ಅವರು, “ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ (ಪ್ರಿ-ಲಿಟಿಗೇಷನ್) ಪ್ರಕರಣಗಳನ್ನು ಪರಸ್ಪರ ಮಾತುಕತೆ ಮತ್ತು ಸೌಹಾರ್ದಯುತ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ” ಎಂದರು.

ನ್ಯಾಯ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಯಾರೂ ನ್ಯಾಯದಿಂದ ದೂರ ಉಳಿಯಬಾರದು; ಕೋಲಾರ ಜಿಲ್ಲೆಯ ಅರ್ಹ ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ನೀಲಚಾರಿ ಬಡಿಗೇರ್ ಅವರು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande