
ಬೆಂಗಳೂರು, 09 ನವೆಂಬರ್ (ಹಿ.ಸ.):
ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸುವುದರ ಜೊತೆಗೆ, ಅಲ್ಪಸಂಖ್ಯಾತ ಧರ್ಮಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ 'ಜಷ್ನ್-ಎ-ಉರ್ದು' ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಸೇರಿದಂತೆ ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಸಕರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನೂ ಆಲಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಹಾಗೂ ವಿವಿಧ ಸಂದರ್ಭಗಳಲ್ಲಿ ಸಮುದಾಯಗಳಿಗೆ ಕೊಟ್ಟಿರುವ ಮಾತುಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯಾರ ಮನಸ್ಸಿಗೂ ನೋವಾಗದಂತೆ, ಎಲ್ಲರ ಭಾವನೆಗಳಿಗೆ ಗೌರವ ನೀಡಿ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಸಭೆಗಳನ್ನು ನಡೆಸಲಾಗುತ್ತಿದೆ. ಸಂವಿಧಾನದ ಅಡಿಯಲ್ಲಿ ದೊರೆಯಬೇಕಾದ ಗೌರವ ಮತ್ತು ಹಕ್ಕುಗಳನ್ನು ಕಾಪಾಡಲಾಗುವುದು ಎಂದರು.
ಅಲ್ಪಸಂಖ್ಯಾತರ ಧ್ವನಿಯಾಗಿ ಸರ್ಕಾರವಿದೆ
ಕೆಲವರಿಗೆ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ನಂಬಿಕೆ ಇಲ್ಲದಿರಬಹುದು. ಆದರೆ, ಇತರರಿಗೆ ನಂಬಿಕೆ ಇಲ್ಲ ಎಂಬ ಕಾರಣಕ್ಕೆ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಪರವಾಗಿ ಧ್ವನಿಯಾಗಲು ನಮ್ಮ ಸರ್ಕಾರವಿದೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.
ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವ ಸಂಬಂಧ ಸಚಿವರೊಂದಿಗೆ ಚರ್ಚಿಸಲಾಗಿದೆ. ಅಕಾಡೆಮಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿ ನೆರವು ನೀಡಲಾಗುವುದು. ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿಯೇ ಆಡಳಿತ ನಡೆಸಲಿದೆ. ರಾಹುಲ್ ಗಾಂಧಿ ಸೇರಿದಂತೆ ನಾವೆಲ್ಲರೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಮಾಣವಚನ ಸ್ವೀಕರಿಸಿದ್ದೇವೆ. ಸಂವಿಧಾನವನ್ನು ಉಳಿಸುವುದು ಹಾಗೂ ಎಲ್ಲ ಜಾತಿ, ಧರ್ಮಗಳಿಗೂ ಸಮಾನ ಗೌರವ ಮತ್ತು ರಕ್ಷಣೆ ನೀಡುವ ಮೂಲಕ ಅದರ ಆಶಯಗಳನ್ನು ಎತ್ತಿಹಿಡಿಯುವುದು ಸರ್ಕಾರದ ಬದ್ಧತೆಯಾಗಿದೆ ಎಂದರು.
ಉರ್ದು ಕೇವಲ ಒಂದು ಸಮುದಾಯದ ಭಾಷೆಯಲ್ಲ
ಉರ್ದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಭಾಷೆಯಲ್ಲ. ಅದು ಹೃದಯದ ಭಾಷೆ. ಸಾಹಿತ್ಯ, ಕಾವ್ಯ ಮತ್ತು ಶಾಯಿರಿ ಮೂಲಕ ಜನರ ಮನಸ್ಸನ್ನು ಮುಟ್ಟುವ ಶಕ್ತಿ ಅದಕ್ಕಿದೆ. ಈ ಭಾಷೆಗೆ ಯಾವುದೇ ಗಡಿಯಿಲ್ಲ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಉರ್ದು ಭಾಷೆ ಮತ್ತು ಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಮೈಸೂರು ದಸರಾ ಸಂದರ್ಭದಲ್ಲಿ ನಡೆದ ಉರ್ದು ಶಾಯಿರಿ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಕುಳಿತು ಕಾವ್ಯ ಆಲಿಸಿದ್ದೆ. ಆ ಕಾರ್ಯಕ್ರಮದಲ್ಲಿ ಮುಸ್ಲಿಮರು ಮಾತ್ರವಲ್ಲದೆ ಜೈನರು, ಬ್ರಾಹ್ಮಣರು, ಕನ್ನಡಿಗರು ಹಾಗೂ ಹಿಂದಿ ಮಾತನಾಡುವವರು ಸೇರಿದಂತೆ ವಿವಿಧ ಧರ್ಮ ಮತ್ತು ಭಾಷೆಗಳ ಜನರು ಭಾಗವಹಿಸಿದ್ದರು. ಎಲ್ಲರೂ ಉರ್ದು ಶಾಯಿರಿಯನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ಭಾಷೆ ಜನರನ್ನು ಹೇಗೆ ಬೆಸೆಯಬಲ್ಲದು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದರು.
ಯಾವ ಭಾಷೆಯಲ್ಲಿದ್ದರೂ ಜ್ಞಾನಕ್ಕೆ ಗೌರವ ನೀಡಬೇಕು. ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯನ್ನು ಅಗೌರವದಿಂದ ಕಾಣಬಾರದು. ಭಾಷೆ ಸಂವಹನದ ಮಾಧ್ಯಮವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ತಾಯಿ ಮತ್ತು ತಾಯ್ನುಡಿಯ ಮಹತ್ವ ಅರಿಯಬೇಕು ಎಂದು ತಿಳಿಸಿದರು.
ಕತ್ತರಿಸುವ ಕೆಲಸ ಬೇಡ, ಸೂಜಿಯಂತೆ ಒಗ್ಗೂಡಿಸೋಣ
ನಮ್ಮ ಭಾಷೆಗಳು ಬೇರೆ ಬೇರೆಯಾಗಿರಬಹುದು. ಆದರೆ, ಮನುಷ್ಯರ ಭಾವನೆಗಳು ಒಂದೇ. ಮಾನವೀಯತೆಯೇ ನಮ್ಮ ಜಾತಿ, ಮಾನವೀಯತೆಯೇ ನಮ್ಮ ಧರ್ಮ. ಕಬ್ಬಿಣದಿಂದ ಕತ್ತರಿ ಮತ್ತು ಸೂಜಿ ಎರಡನ್ನೂ ತಯಾರಿಸಬಹುದು. ನಮಗೆ ಕತ್ತರಿಸುವ ಕೆಲಸ ಬೇಡ. ಸೂಜಿಯಂತೆ ಹೊಲೆದು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡೋಣ. ನಮ್ಮ ಸರ್ಕಾರ ಮತ್ತು ಪಕ್ಷ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತವೆ. ಸಮಾಜವನ್ನು ಒಡೆಯುವ ಕೆಲಸ ನಮಗೆ ಬೇಕಿಲ್ಲ ಎಂದು ಹೇಳಿದರು.
ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ 20 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉರ್ದು ಸಾಹಿತ್ಯದ ಬೆಳವಣಿಗೆಗಾಗಿ ಅಕಾಡೆಮಿ ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.