
ಬೆಂಗಳೂರು, 09 ನವೆಂಬರ್ (ಹಿ.ಸ.):
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನಿನಲ್ಲಿ 2008ರ ಜುಲೈ 10ಕ್ಕೂ ಮುನ್ನ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸುಮಾರು ಒಂದು ಲಕ್ಷ ಆಸ್ತಿದಾರರಿಗೆ ಆಸ್ತಿ ಹಕ್ಕು ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತು ಸೋಮವಾರ ಬಿಡಿಎ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂಮಾಲೀಕರಿಗೆ ಹಕ್ಕುಪತ್ರ ಒದಗಿಸುವುದು ಸೇರಿದಂತೆ ಹಲವು ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ಕಡಿತ
ಬಿಡಿಎ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನಿನಲ್ಲಿ 2008ರ ಜುಲೈ 10ಕ್ಕೂ ಮೊದಲು ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹಿಂದಿನ ಸರ್ಕಾರ 2021ರಲ್ಲಿ ಶುಲ್ಕ ನಿಗದಿಪಡಿಸಿತ್ತು. ಶುಲ್ಕ ಹೆಚ್ಚಾಗಿದ್ದ ಕಾರಣ ಕೇವಲ 600 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಈಗ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಿ ಮತ್ತೊಂದು ಅವಕಾಶ ನೀಡಲಾಗಿದೆ. ಈ ಸೌಲಭ್ಯ ಕಲ್ಪಿಸಲು ಕಾಯ್ದೆಯ 38(ಡಿ) ಕಲಂಗೆ ತಿದ್ದುಪಡಿ ತರಲಾಗಿದೆ. ಡಿಸೆಂಬರ್ 17ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಎರಡು ವರ್ಷಗಳ ಅವಧಿಯೊಳಗೆ ಈ ಸೌಲಭ್ಯ ಬಳಸಿಕೊಳ್ಳದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮೂಲೆ ನಿವೇಶನಗಳನ್ನು ಹೊರತುಪಡಿಸಿ ಕಟ್ಟಡವಿರುವ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಲಾಗಿದೆ.
* 20x30 ಅಡಿವರೆಗಿನ ನಿವೇಶನಕ್ಕೆ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು.
* 20x30 ಅಡಿಗಿಂತ ಹೆಚ್ಚು ಹಾಗೂ 30x40 ಅಡಿವರೆಗಿನ ನಿವೇಶನಕ್ಕೆ ಶೇ.12.5ರಷ್ಟು.
* 30x40 ಅಡಿಗಿಂತ ಹೆಚ್ಚು ಹಾಗೂ 40x60 ಅಡಿವರೆಗಿನ ನಿವೇಶನಕ್ಕೆ ಶೇ.20ರಷ್ಟು.
* 40x60 ಅಡಿಗಿಂತ ಹೆಚ್ಚು ಹಾಗೂ 50x80 ಅಡಿವರೆಗಿನ ನಿವೇಶನಕ್ಕೆ ಶೇ.25ರಷ್ಟು ಶುಲ್ಕ ವಿಧಿಸಲಾಗುತ್ತದೆ.
ಈ ದರಗಳು ಹಿಂದಿನ ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಶೇ.50ರಷ್ಟು ಕಡಿಮೆಯಾಗಿವೆ. ಆಸ್ತಿದಾರರು ಈ ಅವಕಾಶ ಬಳಸಿಕೊಂಡು ತಮ್ಮ ಆಸ್ತಿಯ ಹಕ್ಕು ಪಡೆದುಕೊಳ್ಳಬೇಕು. ಬೆಂಗಳೂರಿಗರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ‘ಸ್ವಚ್ಛ ಬಿಡಿಎ’ ಪರಿಕಲ್ಪನೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಭೂಮಿ ನೀಡಿದವರಿಗೆ ಪ್ರೋತ್ಸಾಹದಾಯಕ ನಿವೇಶನ
ಕೆಂಪೇಗೌಡ ಬಡಾವಣೆ ಸೇರಿದಂತೆ ವಿವಿಧ ಯೋಜನೆಗಳಿಗೆ ಯಾವುದೇ ವ್ಯಾಜ್ಯವಿಲ್ಲದೆ ಸ್ವಯಂಪ್ರೇರಣೆಯಿಂದ ಭೂಮಿ ಬಿಟ್ಟುಕೊಟ್ಟವರಿಗೆ ಒಂದು ಎಕರೆಗೆ ಒಂದು 30x40 ಅಡಿ ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 2014ರಿಂದ ಬಾಕಿ ಉಳಿದಿದ್ದ ಈ ಪ್ರೋತ್ಸಾಹಕ ನಿವೇಶನ ವಿತರಣೆಗೆ 1989ರ ಕಾಯ್ದೆಯ ಪ್ರಕಾರ ಸೂಕ್ತ ಅರ್ಜಿ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಭೂಮಿ ನೀಡಿದ ರೈತರ ಕೊಡುಗೆಯನ್ನು ಸ್ಮರಿಸಲು ಬಡಾವಣೆಯಲ್ಲಿ ಕೃತಜ್ಞತಾ ಗೋಡೆಯನ್ನು ನಿರ್ಮಿಸಲಾಗಿದೆ. ಇದು ದೇಶದ ಇತಿಹಾಸದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೆ ಒಂದೇ ದಿನದಲ್ಲಿ ಪಾರದರ್ಶಕವಾಗಿ ನಿವೇಶನ ಮಂಜೂರು ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ ಎಂದರು.
ಅಂಚಿನ ಜಾಗ ಹಂಚಿಕೆಗೆ ಅವಕಾಶ
ಬಿಡಿಎ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಹಿಂಭಾಗ ಅಥವಾ ಅಕ್ಕಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿದ ಹೆಚ್ಚುವರಿ ಅಂಚಿನ ಜಾಗ ಲಭ್ಯವಿದ್ದರೆ, ಅದನ್ನು ಪಡೆಯಲು ಆಸಕ್ತರು ಡಿಸೆಂಬರ್ 17, 2026ರೊಳಗೆ ಅರ್ಜಿ ಸಲ್ಲಿಸಬಹುದು. ಕಾಯ್ದೆಯಡಿ 600 ಚದರ ಅಡಿವರೆಗಿನ ಅಂಚಿನ ಜಾಗವನ್ನು ಹಂಚಿಕೆ ಮಾಡಲು ಅವಕಾಶವಿದೆ. ಅರ್ಹ ಹಂಚಿಕೆದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶುದ್ಧ ಕ್ರಯಪತ್ರ ಮೇಳ ಆಯೋಜನೆ
ಬಿಡಿಎ ನಿವೇಶನ ಹಂಚಿಕೆ ಪಡೆದು ಹತ್ತು ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಶುದ್ಧ ಕ್ರಯಪತ್ರ ಮಾಡಿಸಿಕೊಳ್ಳದ ಸುಮಾರು 20 ಸಾವಿರ ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳ ಆಯೋಜಿಸಲಾಗುತ್ತಿದೆ.
ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 17, 2026ರೊಳಗೆ ಅರ್ಜಿ ಸಲ್ಲಿಸಿದರೆ, ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರ ನೋಂದಣಿ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಹೊಸ ಕಟ್ಟಡ
ಬಿಡಿಎ 50ನೇ ವರ್ಷಾಚರಣೆ ಸ್ಮರಣಾರ್ಥ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಬಹುಪಯೋಗಿ ಪ್ರಾಧಿಕಾರದ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಪ್ರಾಧಿಕಾರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.