ಲಂಚದ ಆರೋಪ ಸಾಬೀತುಪಡಿಸಿ, ಇಲ್ಲವೇ ಬಹಿರಂಗ ಕ್ಷಮೆ ಕೇಳಿ: ಕುಮಾರಸ್ವಾಮಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಸವಾಲು
ಹಾಸನ, 09 ನವೆಂಬರ್ (ಹಿ.ಸ.): ಜಿಲ್ಲಾಧಿಕಾರಿ ಲತಾಕುಮಾರಿ ಅವರು ವರ್ಗಾವಣೆ ತಪ್ಪಿಸಿಕೊಳ್ಳಲು ತಮಗೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲು ಆಧಾರಗಳಿದ್ದರೆ ಸಂಬಂಧಪಟ್ಟ
ಸಚಿವ ಕೆ.ಎಂ. ಶಿವಲಿಂಗೇಗೌಡ


ಹಾಸನ, 09 ನವೆಂಬರ್ (ಹಿ.ಸ.):

ಜಿಲ್ಲಾಧಿಕಾರಿ ಲತಾಕುಮಾರಿ ಅವರು ವರ್ಗಾವಣೆ ತಪ್ಪಿಸಿಕೊಳ್ಳಲು ತಮಗೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಈ ಆರೋಪವನ್ನು ಸಾಬೀತುಪಡಿಸಲು ಆಧಾರಗಳಿದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಯ ಮುಂದೆ ಹಾಜರುಪಡಿಸಲಿ. ಇಲ್ಲದಿದ್ದರೆ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕ ಬದುಕಿನಲ್ಲಿರುವವರ ವಿರುದ್ಧ ಗಂಭೀರ ಆರೋಪ ಮಾಡುವಾಗ ಅದನ್ನು ಸಾಬೀತುಪಡಿಸುವ ಜವಾಬ್ದಾರಿಯೂ ಇರಬೇಕು. ವಾಟ್ಸ್‌ಆ್ಯಪ್ ಸಂಭಾಷಣೆಯ ಪ್ರತಿಗಳನ್ನು ಮುಂದಿಟ್ಟು ಆರೋಪ ಮಾಡಲಾಗಿದೆ. ಮೊದಲು ಆ ಸಂಭಾಷಣೆಗಳ ನೈಜತೆಯನ್ನು ಪರಿಶೀಲಿಸಬೇಕು. ಯಾರೋ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಲ್ಲಿ ಹೆಸರು ಪ್ರಸ್ತಾಪವಾದ ಮಾತ್ರಕ್ಕೆ ಹಣದ ವ್ಯವಹಾರ ನಡೆದಿದೆ ಎಂಬ ತೀರ್ಮಾನಕ್ಕೆ ಹೇಗೆ ಬರಲು ಸಾಧ್ಯ? ತಮಗೆ ಹಣ ನೀಡಿರುವುದಕ್ಕೆ ಯಾವ ಆಧಾರವಿದೆ ಎಂದು ಪ್ರಶ್ನಿಸಿದ್ದಾರೆ.

ಹಾಸನಾಂಬಾ ದೇವಿಯ ದರ್ಶನ ಪಡೆದು ಪವಿತ್ರ ಸನ್ನಿಧಿಯಲ್ಲಿ ಇಂತಹ ಸುಳ್ಳು ಆರೋಪ ಮಾಡಬಾರದು. ದೇವಿಯ ಮೇಲೆ ಲಕ್ಷಾಂತರ ಭಕ್ತರು ಇಟ್ಟಿರುವ ಶ್ರದ್ಧೆಗೆ ಗೌರವ ನೀಡಬೇಕು. ಧಾರ್ಮಿಕ ಉತ್ಸವವನ್ನು ರಾಜಕೀಯ ಅಪಪ್ರಚಾರದ ವೇದಿಕೆಯನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ.

ಹಾಸನಾಂಬಾ ಜಾತ್ರಾ ಮಹೋತ್ಸವದ ನಿರ್ವಹಣೆಯಲ್ಲಿ ಒಂದೇ ಒಂದು ಪೈಸೆಯೂ ಲೋಪವಾಗಲು ಬಿಡುವುದಿಲ್ಲ. ದೇವಿಯ ಪಾದದ ಮೇಲೆ ಆಣೆ ಮಾಡಿ ಹೇಳಲು ಸಿದ್ಧನಿದ್ದೇನೆ. ಉತ್ಸವದ ವ್ಯವಸ್ಥೆಗಳ ಕುರಿತು ಪ್ರತ್ಯಕ್ಷ ಸಾಕ್ಷಿಗಳ ಮೂಲಕ ವಿವರಿಸಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ 20 ದಿನಗಳಿಂದ ಮನೆಯಲ್ಲಿ ಮಲಗದೆ ಹಾಸನದಲ್ಲಿಯೇ ಉಳಿದು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಂಸದರೊಂದಿಗೆ ಶ್ರಮಿಸುತ್ತಿದ್ದೇನೆ. ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ಬಿಡಬೇಕು. ಆಡಳಿತದಲ್ಲಿ ಲೋಪಗಳಿದ್ದರೆ ದಾಖಲೆ ಸಹಿತ ಪ್ರಶ್ನಿಸಲಿ, ಅದಕ್ಕೆ ಉತ್ತರ ನೀಡುತ್ತೇನೆ. ಆದರೆ ಯಾವುದೇ ಆಧಾರವಿಲ್ಲದೆ ತಮ್ಮ ಹಾಗೂ ಜಿಲ್ಲಾಧಿಕಾರಿಯವರ ಗೌರವಕ್ಕೆ ಧಕ್ಕೆ ತರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆ ಕೇಳಬೇಕು. ಹಾಸನಾಂಬೆಯ ಸನ್ನಿಧಿಯ ಪಾವಿತ್ರ್ಯಕ್ಕೆ ಗೌರವ ನೀಡುವುದರ ಜೊತೆಗೆ ತಮ್ಮ ಮಾತಿನ ಜವಾಬ್ದಾರಿಯನ್ನೂ ಹೊರಬೇಕು ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande