
ಬೆಂಗಳೂರು, 08 ನವೆಂಬರ್ (ಹಿ.ಸ.):
ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದ್ದ ಕೇಂದ್ರ ಸರ್ಕಾರ ಇದೀಗ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಎಥೆನಾಲ್ ಖರೀದಿಸಲು ಹಿಂದೇಟು ಹಾಕುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಆರಂಭಿಸಿವೆ.
ಆದರೆ, ಇದೀಗ ಉತ್ಪಾದನೆಯಾದ ಎಥೆನಾಲ್ ಖರೀದಿಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಥೆನಾಲ್ನಲ್ಲಿ ಶೇ.40ರಷ್ಟನ್ನೂ ಖರೀದಿ ಮಾಡುತ್ತಿಲ್ಲ. ಕೇವಲ ಶೇ.20ರಿಂದ 30ರಷ್ಟು ಮಾತ್ರ ಖರೀದಿಸಲಾಗುತ್ತಿದೆ.
ಎಲ್ಲರೂ ಎಥೆನಾಲ್ ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿದ ಬಳಿಕ ಈಗ ಖರೀದಿಸದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.
ಎಥೆನಾಲ್ ವಿಚಾರವಾಗಿ ತನಿಖೆಯಾಗಲಿ
ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ತಿರಸ್ಕರಿಸುತ್ತಿದೆ. ಎಥೆನಾಲ್ ಉತ್ಪಾದನೆ ಮತ್ತು ಖರೀದಿ ವಿಚಾರವಾಗಿ ಸಮಗ್ರ ತನಿಖೆಯಾಗಲಿ ಎಂದು ಎಂ.ಬಿ. ಪಾಟೀಲ್ ಒತ್ತಾಯಿಸಿದರು.
ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವರು ಚರ್ಚಿಸಿ, ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಎಥೆನಾಲ್ ಖರೀದಿ ನೀತಿಯಿಂದ ರಾಜ್ಯದ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸುಳಿವನ್ನು ಸಚಿವರು ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R