ಹಾಲಿನ ದರ ಇಳಿಸಲು ವಿಜಯೇಂದ್ರ ಆಗ್ರಹ
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನವೆಂಬರ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಹಾಲಿನ ದರವನ್ನು ತಕ್ಷಣವೇ ಲೀಟರ್ಗೆ 4-5 ರೂ. ಇಳಿಸುವಂತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
bjp-protest-milk-price-hike


ಬೆಂಗಳೂರು, 08 ನವೆಂಬರ್ (ಹಿ.ಸ.):

ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಗಳು ಹಾಗೂ ಅವೈಜ್ಞಾನಿಕ ನಿರ್ಧಾರಗಳನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ತಮ್ಮ ಧವಳಗಿರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿನ ದರವನ್ನು ತಕ್ಷಣವೇ ಲೀಟರ್ಗೆ 4 ರಿಂದ 5 ರೂಪಾಯಿಗಳಷ್ಟು ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಯೊಂದು ವಸ್ತುವಿನ ದರ ಏರಿಸಿ ಜನರ ಮೇಲೆ ಬರೆ

ನಾಡಿನ ಜನತೆ ಈ ಬಾರಿಯ ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸಲಾಗದ ಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರವು ಕಳೆದ ಮೂರೂವರೆ ವರ್ಷಗಳಲ್ಲಿ ಬೆಲೆ ಏರಿಕೆಯನ್ನು ಮಾತ್ರ ಸಾಧನೆಯಾಗಿ ಮಾಡಿದೆ ಎಂದು ಅವರು ಟೀಕಿಸಿದರು.

ಪೆಟ್ರೋಲ್, ಮದ್ಯ, ಹಾಲು, ನೀರು, ಜಂಗಲ್ ಸಫಾರಿ, ಆಸ್ಪತ್ರೆ ಶುಲ್ಕ ಹಾಗೂ ಬಸ್ ಟಿಕೆಟ್ ದರಗಳನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ. ಬಸ್ ಪ್ರಯಾಣ ದರವನ್ನು ಶೇ. 45ರಷ್ಟು, ಹಾಲಿನ ದರವನ್ನು 8 ರೂ., ಮೊಸರಿನ ದರವನ್ನು 14 ರೂ. ಹಾಗೂ ತುಪ್ಪದ ದರವನ್ನು 180 ರೂ.ಗಳಷ್ಟು ಏರಿಸಲಾಗಿದೆ.

ಪರಿಣಾಮವಾಗಿ ಸಾಮಾನ್ಯ ಜನರು ಒಂದು ಲೋಟ ಹಾಲು ಕುಡಿಯಲು ಸಹ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರಿಗೆ ಸಹಾಯಧನ ನೀಡುವ ನೆಪದಲ್ಲಿ ಸಾರ್ವಜನಿಕರ ಮೇಲೆ ಸರ್ಕಾರದ ವೆಚ್ಚದ ಹೊರೆಯನ್ನು ಹಾಕಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದರು.

'ಶಕ್ತಿ' ಯೋಜನೆಯ ಬಾಕಿ ಹಣವನ್ನು ಸಾರಿಗೆ ನಿಗಮಗಳಿಗೆ ಸರಿಯಾಗಿ ಪಾವತಿಸದ ಕಾರಣ, ಬಸ್ಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲದ ಸ್ಥಿತಿಗೆ ಸರ್ಕಾರ ತಲುಪಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.

ಅಲ್ಲದೆ, ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹಣವಿಲ್ಲದೆ ಅವುಗಳನ್ನು ದತ್ತು ನೀಡಲು ಮುಂದಾಗಿರುವುದು ಸರ್ಕಾರದ ಆರ್ಥಿಕ ದಿವಾಳಿತನವನ್ನು ತೋರಿಸುತ್ತದೆ.

ಉಚಿತ ಯೋಜನೆಗಳ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನವೆಂಬರ್ 11ರಂದು ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ

ಸರ್ಕಾರದ ಈ ಜನವಿರೋಧಿ ದರ ಏರಿಕೆ ನೀತಿಯನ್ನು ಖಂಡಿಸಿ ನವೆಂಬರ್ 11 ರಂದು ಇಡೀ ದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ.

ಪಕ್ಷದ ಎಲ್ಲಾ ಪ್ರಮುಖ ನಾಯಕರು ಈ ಧರಣಿಯಲ್ಲಿ ಭಾಗವಹಿಸಲಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮುಂದುವರೆಯಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

ಇಂಧನದಲ್ಲಿ ಎಥೆನಾಲ್ ಮಿಶ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ.

ಬಿಪಿಸಿಎಲ್, ಐಒಸಿಎಲ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಮಾನದಂಡಗಳ ಪ್ರಕಾರವೇ ಎಥೆನಾಲ್ ಪೂರೈಕೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮ್ಮ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೋಸ್ಟರ್ ಸಮರದ ಕುರಿತು ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ನ ಅಗ್ಗದ ಪ್ರಚಾರದ ತಂತ್ರವಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂತಹ ಚೀಪ್ ಗಿಮಿಕ್ ಮಾಡುವ ಬದಲು ತಮ್ಮ ಗೃಹ ಇಲಾಖೆಯ ಸಾಧನೆ ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande