
ದಾವಣಗೆರೆ, 08 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ವ್ಯಾಪಾರಿಗಳ ಹಾಗೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ನಗರದ ಹಳೆ ಪ್ರವಾಸಿ ಮಂದಿರದ ಮಾರುಕಟ್ಟೆಯಲ್ಲಿ ಈ ಬಾರಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಮಾರುಕಟ್ಟೆ ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದೆ.
ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಂದ ವ್ಯಾಪಾರಿಗಳು ಬಾಳೆದಿಂಡು, ಮಾವಿನ ಸೊಪ್ಪು, ಕಾಚಿಕಡ್ಡಿ, ಬಾಳೆ ಎಲೆ ಸೇರಿದಂತೆ ಹಬ್ಬಕ್ಕೆ ಅಗತ್ಯವಾದ ವಿವಿಧ ವಸ್ತುಗಳನ್ನು ತಂದು ಮಾರಾಟ ಮಾಡುತ್ತಾರೆ.
ಈ ಬಾರಿಯೂ ಗ್ರಾಮೀಣ ಭಾಗದ ಮಹಿಳಾ ವ್ಯಾಪಾರಿಗಳು ಮಾರುಕಟ್ಟೆಗೆ ವಿವಿಧ ವಸ್ತುಗಳನ್ನು ತಂದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ.
ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಉತ್ತಮ ವ್ಯಾಪಾರ ನಡೆದಿತ್ತು. ಆದರೆ ಈ ಬಾರಿ ಹಣ್ಣು, ಹೂವು ಸೇರಿದಂತೆ ಹಬ್ಬದ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೆಲೆ ವಿಚಾರಿಸಲು ಬರುವವರ ಸಂಖ್ಯೆ ಹೆಚ್ಚಿದ್ದರೂ ಖರೀದಿ ಮಾಡುವವರು ಕಡಿಮೆಯಾಗಿದ್ದಾರೆ.
ಈ ಕುರಿತು ಅಳಲು ತೋಡಿಕೊಂಡ ಮಹಿಳಾ ವ್ಯಾಪಾರಿಯೊಬ್ಬರು, ಕಳೆದ ವರ್ಷ ಹಬ್ಬದ ಸಂದರ್ಭದಲ್ಲಿ ಒಳ್ಳೆಯ ವ್ಯಾಪಾರವಾಗಿತ್ತು. ಈ ಬಾರಿ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹಣ್ಣು, ಹೂವು ಹಾಗೂ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಬೆಲೆ ಹೆಚ್ಚಾಗಿದೆ. ಗ್ರಾಹಕರು ಬೆಲೆ ಕೇಳಿ ಹೋಗುತ್ತಿದ್ದಾರೆ.
ನಮಗೆ ಎರಡು ಕಾಸು ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಸಂಜೆ ವೇಳೆಯಾದರೂ ಗ್ರಾಹಕರು ಬಂದು ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ, ದೀಪಾವಳಿ ಹಬ್ಬದ ಖರೀದಿಯ ಮೇಲೆ ಬೆಲೆ ಏರಿಕೆಯ ಪರಿಣಾಮ ಬೀರಿದ್ದು, ವ್ಯಾಪಾರ ಕುಸಿತದಿಂದ ಗ್ರಾಮೀಣ ಭಾಗದಿಂದ ಬಂದಿರುವ ಸಣ್ಣ ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R