ಕಳೆದ 12 ವರ್ಷಗಳಲ್ಲಿ ಪ್ರಜಾಪ್ರಭುತ್ವ, ಸಾಂಸ್ಥಿಕ ವ್ಯವಸ್ಥೆಗೆ ಭಾರಿ ಹಾನಿ: ಸೋನಿಯಾ ಗಾಂಧಿ
ನವದೆಹಲಿ, 07 ನವೆಂಬರ್ (ಹಿ.ಸ.): ಕಳೆದ 12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಸಾಮರಸ್ಯದ ಮೇಲೆ ಭಾರಿ ಹಾನಿಯಾಗಿದೆ. ಕೇಂದ್ರದ ಈಗಿನ ಸರ್ಕಾರ ಅಧಿಕಾರದಿಂದ ನಿರ್ಗಮಿಸಿದ ಬಳಿಕವೂ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಪುನಃ ಬಲಪಡಿಸಲು
अपनी आने वाली पुस्तक ‘बिलॉन्गिंग : अ जर्नी ऑफ लव’ के साथ सोनिया गांधी।  (फाइल फोटो)


ನವದೆಹಲಿ, 07 ನವೆಂಬರ್ (ಹಿ.ಸ.):

ಕಳೆದ 12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಸಾಮರಸ್ಯದ ಮೇಲೆ ಭಾರಿ ಹಾನಿಯಾಗಿದೆ. ಕೇಂದ್ರದ ಈಗಿನ ಸರ್ಕಾರ ಅಧಿಕಾರದಿಂದ ನಿರ್ಗಮಿಸಿದ ಬಳಿಕವೂ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಪುನಃ ಬಲಪಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಗಂಭೀರವಾಗಿ ಒಗ್ಗಟ್ಟಿನ ಪ್ರಯತ್ನ ನಡೆಸಬೇಕು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ತಮ್ಮ ಮುಂಬರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಪ್ರಕಟಣೆಗೆ ಮುನ್ನ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸುತ್ತಿರುವ ಈ ಪುಸ್ತಕ ನವೆಂಬರ್ 10ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ನವೆಂಬರ್ 16ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ತಮ್ಮ ವೈಯಕ್ತಿಕ ಬದುಕು, ಭಾರತದೊಂದಿಗಿನ ನಂಟು, ರಾಜಕೀಯ ಪಯಣ, ಕಾಂಗ್ರೆಸ್ ಪಕ್ಷದ ಪಾತ್ರ ಹಾಗೂ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಗಳ ಕುರಿತು ಪುಸ್ತಕದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ.

ದೇಶದ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಿರುವ ಹಾನಿಯ ಅರಿವು ಈಗ ಜನರಿಗೆ ಉಂಟಾಗುತ್ತಿದೆ. ಆದರೂ ದೇಶದ ಭವಿಷ್ಯದ ಬಗ್ಗೆ ತಾವು ಆಶಾವಾದ ಹೊಂದಿರುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಸ್ತುತ ಸ್ಥಿತಿ ಮತ್ತು ಚುನಾವಣಾ ಭವಿಷ್ಯದ ಕುರಿತು ಮಾತನಾಡಿದ ಅವರು, ಪಕ್ಷದ ಪರಿಸ್ಥಿತಿಯ ಬಗ್ಗೆ ತಾವು ನಿರಾಶಾವಾದಿಯಾಗಿಲ್ಲ ಎಂದಿದ್ದಾರೆ. ಕೇಂದ್ರದಲ್ಲಿ ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಸಮಾನ ಅವಕಾಶಗಳು ದೊರೆತಿಲ್ಲ. ಎಲ್ಲ ಸಂಸ್ಥೆಗಳ ಮೇಲೆ, ಅದರಲ್ಲೂ ವಿಶೇಷವಾಗಿ ಚುನಾವಣಾ ಆಯೋಗದ ಮೇಲೆ ಸರ್ಕಾರ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಆರೋಪಿಸಿದ್ದಾರೆ.

ಮುಖ್ಯವಾಹಿನಿಯ ಮಾಧ್ಯಮಗಳೂ ಸರ್ಕಾರದ ಪ್ರಭಾವಕ್ಕೆ ಒಳಗಾಗಿವೆ. ಹಣಬಲ ಮತ್ತು ಧರ್ಮದ ಬಳಕೆಯ ಮೂಲಕ ರಾಜಕೀಯ ಸ್ಪರ್ಧೆಯನ್ನು ಪ್ರಭಾವಿತಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ. ಇಷ್ಟೆಲ್ಲ ಸವಾಲುಗಳು ಮತ್ತು ದಮನದ ನಡುವೆಯೂ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಗಳು ಮತ್ತು ಜಿಲ್ಲೆಗಳಲ್ಲಿ ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಹಲವು ಚುನಾವಣೆಗಳಲ್ಲಿ ಅಕ್ರಮಗಳು ಮತ್ತು ಮತಗಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ಜನರಲ್ಲಿಯೂ ಜಾಗೃತಿ ಹೆಚ್ಚುತ್ತಿದೆ. ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಪಕ್ಷದ ರಾಜಕೀಯ ಅವಕಾಶಗಳು ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿದೇಶಿ ಮೂಲದ ವಿವಾದದಿಂದ ನೋವಾಗಿತ್ತು

1999ರಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರಿಕ್ ಅನ್ವರ್ ಅವರು ತಮ್ಮ ವಿದೇಶಿ ಮೂಲದ ವಿಚಾರವನ್ನು ಪ್ರಸ್ತಾಪಿಸಿದ್ದ ಘಟನೆಯ ಬಗ್ಗೆಯೂ ಸೋನಿಯಾ ಗಾಂಧಿ ಮಾತನಾಡಿದ್ದಾರೆ. ಈ ಘಟನೆ ಪ್ರಧಾನಿ ಹುದ್ದೆಯನ್ನು ಸ್ವೀಕರಿಸದ ತಮ್ಮ ನಿರ್ಧಾರವನ್ನು ಮತ್ತಷ್ಟು ಬಲಪಡಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಹೋದ್ಯೋಗಿಗಳ ನಿಲುವಿನಿಂದ ತಮಗೆ ತೀವ್ರ ನೋವಾಗಿತ್ತು ಎಂದು ತಿಳಿಸಿದ್ದಾರೆ.

ಆ ನಾಯಕರು ತಮ್ಮನ್ನು ನಂಬಿದ್ದಾರೆ ಎಂದು ಭಾವಿಸಿದ್ದೆ. ಆದರೆ, ಅವರಲ್ಲಿ ಅಂತಹ ವಿಶ್ವಾಸ ಇರಲಿಲ್ಲ ಎಂಬುದು ನಂತರ ತಿಳಿಯಿತು. ತಮ್ಮನ್ನು ಇನ್ನೂ ಹೊರಗಿನ ವ್ಯಕ್ತಿಯೆಂದೇ ಪರಿಗಣಿಸುತ್ತಿದ್ದಾರೆ ಎಂಬ ಸಂಗತಿ ಆಘಾತ ಉಂಟುಮಾಡಿತ್ತು. ಆಗ ಕಣ್ಣೀರು ಬಂದಿದ್ದರಿಂದ ಸಭೆಯಿಂದ ಹೊರನಡೆದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಯಾವುದೇ ಹುದ್ದೆ ಅಥವಾ ಅಧಿಕಾರ ಸಿಗಲಿಲ್ಲ ಎಂಬುದು ತಮ್ಮ ನೋವಿಗೆ ಕಾರಣವಾಗಿರಲಿಲ್ಲ. ಭಾರತದ ಬಗೆಗಿನ ತಮ್ಮ ನಿಷ್ಠೆಯನ್ನೇ ಪ್ರಶ್ನಿಸಿದ್ದರಿಂದ ನೋವಾಗಿತ್ತು ಎಂದು ಹೇಳಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ಜತೆ ಹೊಂದಾಣಿಕೆ ಅಸಾಧ್ಯ

ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯ ಕುರಿತು ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಈ ಎರಡೂ ಸಂಘಟನೆಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ; ಮುಂದೆಯೂ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯದಲ್ಲಿ ಕೆಲವೊಮ್ಮೆ ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜತೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಲ್ಲ ನಾಗರಿಕರೂ ಯಾವುದೇ ಭಯವಿಲ್ಲದೆ ತಮ್ಮ ಧರ್ಮ ಮತ್ತು ನಂಬಿಕೆಗಳನ್ನು ಪಾಲಿಸುವ ಸಾಂವಿಧಾನಿಕ ಹಕ್ಕನ್ನು ಕಾಂಗ್ರೆಸ್‌ನ ಅಧಿಕೃತ ಸಿದ್ಧಾಂತ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಕಲಿಯಬೇಕಾದ ಅಂಶಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿ ವಿಭಿನ್ನ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿಯೂ ರಾಜಕೀಯ ಯಶಸ್ಸಿಗೆ ಹಲವು ಉದಾಹರಣೆಗಳಿವೆ. ಆರ್‌ಎಸ್‌ಎಸ್‌ನಿಂದ ಕಾಂಗ್ರೆಸ್ ಕಲಿಯಬೇಕಾದದ್ದು ಹೆಚ್ಚೇನೂ ಇಲ್ಲ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ

ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಒಂದು ಕರಾಳ ಅಧ್ಯಾಯ ಎಂದು ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ಆ ಅವಧಿಯಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಬಂಧನದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಹಕ್ಕನ್ನೂ ಅಮಾನತುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.

ನಂತರ ಪರಿಸ್ಥಿತಿಯನ್ನು ಅರಿತ ಇಂದಿರಾ ಗಾಂಧಿ, 1977ರ ಮಾರ್ಚ್‌ನಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಅತಿರೇಕಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯನ್ನೂ ಯಾಚಿಸಿದ್ದರು ಎಂದು ಸೋನಿಯಾ ಗಾಂಧಿ ಸಂದರ್ಶನದಲ್ಲಿ ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande