ಕರ್ನಾಟಕದಲ್ಲಿ ಪರೀಕ್ಷಿಸಿದ 56 ಮಾದರಿಗಳಲ್ಲೂ ಇ-20 ಪೆಟ್ರೋಲ್ ಗುಣಮಟ್ಟ ಮಾನದಂಡ ಪಾಲನೆ: ಕೇಂದ್ರ ಪೆಟ್ರೋಲಿಯಂ ಸಚಿವಾಲಯ
ನವದೆಹಲಿ, 07 ನವೆಂಬರ್ (ಹಿ.ಸ.): ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಅಂಶವಿದೆ ಎಂಬ ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗ
ಸಚಿವಾಲಯ ನೀಡಿರುವ ಚಿತ್ರ


ನವದೆಹಲಿ, 07 ನವೆಂಬರ್ (ಹಿ.ಸ.):

ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಅಂಶವಿದೆ ಎಂಬ ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ನಡೆಸಿದ ಪರೀಕ್ಷೆಯಲ್ಲಿ ಇ-20 ಪೆಟ್ರೋಲ್ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿರುವುದು ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳು ನಡೆಸಿದ ಪರೀಕ್ಷೆಗಳ ವಿವರಗಳನ್ನು ಪ್ರಕಟಿಸಿದೆ.

ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ತೈಲ ಸಂಸ್ಕರಣಾಗಾರಗಳು ಹಾಗೂ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಲಾದ ಒಟ್ಟು 893 ಇ-20 ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾರತೀಯ ಮಾನದಂಡಗಳ ಸಂಸ್ಥೆಯ ಐಎಸ್ 17021 ನಿರ್ದಿಷ್ಟತೆಗಳ ಪ್ರಕಾರ ನಡೆಸಿದ ಈ ಪರೀಕ್ಷೆಯಲ್ಲಿ ಎಲ್ಲ ಮಾದರಿಗಳಲ್ಲೂ ಎಥೆನಾಲ್ ಪ್ರಮಾಣ ಶೇ.19ರಿಂದ 21ರ ಮಿತಿಯಲ್ಲಿರುವುದು ಕಂಡುಬಂದಿದೆ.

ಕರ್ನಾಟಕದಲ್ಲಿ ಪರೀಕ್ಷಿಸಲಾದ 56 ಮಾದರಿಗಳೂ ನಿಗದಿತ ಗುಣಮಟ್ಟಕ್ಕೆ ಅನುಗುಣವಾಗಿವೆ. ರಾಜ್ಯದ ವಿವಿಧ ಪ್ರದೇಶಗಳು ಹಾಗೂ ಮೂರು ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಸೇರಿದ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.19ರಿಂದ 20ರಷ್ಟಿದ್ದು, ಸರಾಸರಿ ಶೇ.19.30 ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಾದರಿ ಸಂಗ್ರಹ ಮತ್ತು ಪರೀಕ್ಷಾ ವಿಧಾನಕ್ಕೆ ಆಕ್ಷೇಪ

ಕರ್ನಾಟಕದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಅಕ್ಟೋಬರ್ 2026ರಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕೆಲವು ಬಂಕ್‌ಗಳ ಪೆಟ್ರೋಲ್‌ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ವರದಿ ನೀಡಿತ್ತು. ಆದರೆ ಈ ವರದಿಯಲ್ಲಿನ ಅಂಕಿಅಂಶಗಳು ನಿಗದಿತ ಕಾನೂನು ಮತ್ತು ತಾಂತ್ರಿಕ ವಿಧಾನಗಳ ಪ್ರಕಾರ ನಡೆಸಿದ ಪರೀಕ್ಷೆಗಳಿಂದ ದೃಢಪಟ್ಟಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.

ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿಯಲ್ಲಿ ಹೊರಡಿಸಿರುವ 2005ರ ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ ಪೂರೈಕೆ, ವಿತರಣೆ ಹಾಗೂ ಅಕ್ರಮ ತಡೆ ಆದೇಶ ಮತ್ತು 2024ರ ಮಾರುಕಟ್ಟೆ ಶಿಸ್ತು ಮಾರ್ಗಸೂಚಿಗಳಲ್ಲಿ ಮಾದರಿ ಸಂಗ್ರಹ, ಸಂರಕ್ಷಣೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಿಸುವುದಕ್ಕೆ ನಿರ್ದಿಷ್ಟ ಕ್ರಮಗಳನ್ನು ನಿಗದಿಪಡಿಸಲಾಗಿದೆ.

ಇದರ ಪ್ರಕಾರ ಒಂದು ಲೀಟರ್‌ನ ಆರು ಮಾದರಿಗಳನ್ನು ಸಂಗ್ರಹಿಸಬೇಕು. ಎರಡು ಮಾದರಿಗಳನ್ನು ಸ್ವೀಕೃತಿ ದೃಢೀಕರಣದೊಂದಿಗೆ ಬಂಕ್ ಮಾಲೀಕರಿಗೆ ನೀಡಬೇಕು. ಎರಡು ಮಾದರಿಗಳನ್ನು ತೈಲ ಕಂಪನಿ ಅಥವಾ ಸಂಬಂಧಪಟ್ಟ ಇಲಾಖೆ ಉಳಿಸಿಕೊಳ್ಳಬೇಕು. ಉಳಿದ ಎರಡು ಮಾದರಿಗಳನ್ನು ಅಧಿಕೃತ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮಾದರಿಗಳ ಲೇಬಲ್‌ಗಳಿಗೆ ಸಂಬಂಧಪಟ್ಟ ಎಲ್ಲ ಪ್ರತಿನಿಧಿಗಳು ಸಹಿ ಮಾಡಬೇಕು ಮತ್ತು ನಿಗದಿತ ಅವಧಿಯಲ್ಲಿ ಪರೀಕ್ಷಾ ವರದಿಯನ್ನು ಬಂಕ್ ಮಾಲೀಕರು ಹಾಗೂ ತೈಲ ಕಂಪನಿಗಳಿಗೆ ತಲುಪಿಸಬೇಕು.

ಸೆಪ್ಟೆಂಬರ್ 2026ರಲ್ಲಿ ಸಂಗ್ರಹಿಸಿದ ಮಾದರಿಗಳನ್ನು ರಾಜ್ಯಮಟ್ಟದ ಸಂಯೋಜಕರ ಮೂಲಕ ಅಧಿಕೃತ ತೈಲ ಕಂಪನಿಗಳ ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ ನಡೆದ ಪರಿಶೀಲನೆಯಲ್ಲಿ ತೈಲ ಕಂಪನಿಗಳ ಪ್ರತಿನಿಧಿಗಳ ಭಾಗವಹಿಸುವಿಕೆ ಇಲ್ಲದೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಂಪನಿಗಳು ಆಕ್ಷೇಪಿಸಿವೆ.

ಅಲ್ಲದೆ, ಸಂಗ್ರಹಿಸಿದ ಮಾದರಿಗಳ ಪ್ರತಿಗಳನ್ನು, ಬಂಕ್‌ವಾರು ಸಂಪೂರ್ಣ ವಿವರಗಳನ್ನು ಹಾಗೂ ಪ್ರಯೋಗಾಲಯದ ವರದಿಗಳನ್ನು ಒದಗಿಸುವಂತೆ ಕೋರಿದ್ದರೂ ಇದುವರೆಗೆ ದೊರೆತಿಲ್ಲ ಎಂದು ತಿಳಿಸಿವೆ. ಮೂರನೇ ವ್ಯಕ್ತಿಯ ಖಾಸಗಿ ಪ್ರಯೋಗಾಲಯ ನೀಡಿರುವ ಪ್ರಮಾಣಪತ್ರಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. ಆದರೆ ಅದರಲ್ಲಿ ಪರೀಕ್ಷೆಗೆ ಬಳಸಿದ ತಾಂತ್ರಿಕ ವಿಧಾನದ ಸಂಪೂರ್ಣ ವಿವರಗಳಿಲ್ಲ ಎಂದು ಕಂಪನಿಗಳು ಹೇಳಿವೆ.

ಎಥೆನಾಲ್ ಪರೀಕ್ಷೆಯ ವಿಧಾನದಲ್ಲೂ ಲೋಪದ ಆರೋಪ

ಐಎಸ್ 17021:2018ರ 2025ರ ಆಗಸ್ಟ್‌ನ ತಿದ್ದುಪಡಿ ಪ್ರಕಾರ ಇ-20 ಪೆಟ್ರೋಲ್‌ನಲ್ಲಿನ ಎಥೆನಾಲ್ ಪ್ರಮಾಣವನ್ನು ನಿರ್ಧರಿಸಲು ನಿರ್ದಿಷ್ಟ ಪರೀಕ್ಷಾ ವಿಧಾನಗಳನ್ನು ಅನುಸರಿಸಬೇಕು. ಇದರಲ್ಲಿ ಫೋರಿಯರ್ ಟ್ರಾನ್ಸ್‌ಫಾರ್ಮ್ ಇನ್‌ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ, ನೀರಿನ ಮೂಲಕ ಬೇರ್ಪಡಿಸುವ ವಿಧಾನ ಅಥವಾ ಗ್ಯಾಸ್ ಕ್ರೊಮ್ಯಾಟೋಗ್ರಫಿ ವಿಧಾನ ಸೇರಿವೆ.

ಗ್ಯಾಸ್ ಕ್ರೊಮ್ಯಾಟೋಗ್ರಫಿ ಪರೀಕ್ಷೆ ನಡೆಸುವಾಗ ಮಾದರಿಯನ್ನು ಎಥೆನಾಲ್ ಅಥವಾ ಇತರ ಆಮ್ಲಜನಕಯುಕ್ತ ಅಂಶಗಳಿಲ್ಲದ ಪೆಟ್ರೋಲ್‌ನೊಂದಿಗೆ 1:1 ಅನುಪಾತದಲ್ಲಿ ಬೆರೆಸಬೇಕು. ನಂತರ ಇ-10 ಪ್ರಮಾಣೀಕೃತ ಉಲ್ಲೇಖ ಮಾದರಿಯ ಆಧಾರದ ಮೇಲೆ ಫಲಿತಾಂಶವನ್ನು ಸರಿಪಡಿಸಬೇಕು.

ಆದರೆ ಕರ್ನಾಟಕ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಿರುವ ಪ್ರಮಾಣಪತ್ರಗಳಲ್ಲಿ ಗ್ಯಾಸ್ ಕ್ರೊಮ್ಯಾಟೋಗ್ರಫಿ ಪರೀಕ್ಷೆಯ ಬಗ್ಗೆ ಮಾತ್ರ ಉಲ್ಲೇಖವಿದ್ದು, ಅನುಸರಿಸಿದ ನಿರ್ದಿಷ್ಟ ಮಾನದಂಡ, ಮಾದರಿಯನ್ನು ಬೆರೆಸಿದ ವಿಧಾನ ಹಾಗೂ ಬಳಸಿದ ಉಲ್ಲೇಖ ಮಾದರಿಯ ವಿವರಗಳಿಲ್ಲ. ಹೀಗಾಗಿ ಶೇ.26ರಿಂದ 31ರಷ್ಟು ಎಥೆನಾಲ್ ಅಂಶವಿದೆ ಎಂಬ ವರದಿಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ತೈಲ ಕಂಪನಿಗಳು ತಿಳಿಸಿವೆ.

ವರದಿಯಲ್ಲಿ ನಮೂದಿಸಿರುವ ಪೆಟ್ರೋಲ್ ಸಾಂದ್ರತೆಯ ಅಂಕಿಅಂಶಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿವೆ. ಶೇ.26ರಿಂದ 31ರಷ್ಟು ಎಥೆನಾಲ್ ಇದೆ ಎಂದು ಹೇಳಲಾದ ಮಾದರಿಗಳ ಸಾಂದ್ರತೆ ಪ್ರತಿ ಘನ ಸೆಂಟಿಮೀಟರ್‌ಗೆ 0.742ರಿಂದ 0.749 ಗ್ರಾಂ ದಾಖಲಾಗಿದೆ. ಆದರೆ ತೈಲ ಕಂಪನಿಗಳು ನಡೆಸಿದ ಪರೀಕ್ಷೆಯಲ್ಲಿ ಇ-20 ಮಾದರಿಗಳ ಸಾಂದ್ರತೆ 0.752ರಿಂದ 0.760 ಗ್ರಾಂ ದಾಖಲಾಗಿದೆ. ಎಥೆನಾಲ್‌ನ ಸಾಂದ್ರತೆ ಪೆಟ್ರೋಲ್‌ಗಿಂತ ಹೆಚ್ಚಿರುವುದರಿಂದ ಅದರ ಪ್ರಮಾಣ ಹೆಚ್ಚಾದಾಗ ಮಿಶ್ರಣದ ಸಾಂದ್ರತೆಯೂ ಹೆಚ್ಚಾಗಬೇಕೆಂಬುದು ಕಂಪನಿಗಳ ವಾದವಾಗಿದೆ.

ವಾಹನಗಳ ಮೈಲೇಜ್ ನಷ್ಟದ ಅಂದಾಜಿಗೂ ಆಕ್ಷೇಪ

ಇ-20 ಪೆಟ್ರೋಲ್ ಬಳಕೆಯಿಂದ ಗ್ರಾಹಕರಿಗೆ ವಾರ್ಷಿಕ ಸುಮಾರು ₹62,000 ಕೋಟಿ ಮೈಲೇಜ್ ನಷ್ಟ ಹಾಗೂ ವಾಹನಗಳ ದುರಸ್ತಿಗೆ ₹39,000 ಕೋಟಿ ವೆಚ್ಚವಾಗುತ್ತಿದೆ ಎಂಬ ಅಂದಾಜು ವೈಜ್ಞಾನಿಕವಾಗಿ ಪರಿಶೀಲನೆಯಾಗಬೇಕು ಎಂದು ಸಚಿವಾಲಯ ಹೇಳಿದೆ.

ದೇಶದಲ್ಲಿ 30 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಕೋಟಿಗೂ ಹೆಚ್ಚು ನಾಲ್ಕು ಚಕ್ರ ವಾಹನಗಳು ಮೂರು ವರ್ಷಗಳಿಂದ ಇ-20 ಪೆಟ್ರೋಲ್ ಬಳಸುತ್ತಿವೆ. ಪ್ರತಿದಿನ ಆರು ಕೋಟಿಗೂ ಹೆಚ್ಚು ಜನರು ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇ-20 ಇಂಧನದ ಗುಣಮಟ್ಟದಲ್ಲಿ ವ್ಯಾಪಕ ಸಮಸ್ಯೆಯಿದ್ದರೆ ದೊಡ್ಡ ಪ್ರಮಾಣದಲ್ಲಿ ವಾಹನಗಳು ಕೆಟ್ಟು ನಿಲ್ಲುವ ಘಟನೆಗಳು ವರದಿಯಾಗಬೇಕಿತ್ತು. ಆದರೆ ಅಂತಹ ವ್ಯಾಪಕ ಸಮಸ್ಯೆ ಕಂಡುಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಅಂತರ್ ಸಚಿವಾಲಯ ಸಮಿತಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತೀಯ ವಾಹನ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ವಾಹನ ತಯಾರಕರ ಸಂಘಟನೆ ನಡೆಸಿದ ಅಧ್ಯಯನಗಳಲ್ಲಿ ಇ-20 ಇಂಧನದ ಕಾರ್ಯಕ್ಷಮತೆ ಮತ್ತು ಮೈಲೇಜ್ ಕುರಿತು ಪರಿಶೀಲಿಸಲಾಗಿದೆ.

ಇ-20 ಇಂಧನಕ್ಕೆ ಅನುಗುಣವಾಗಿ ರೂಪಿಸಲಾದ ವಾಹನಗಳಲ್ಲಿ ಮೈಲೇಜ್ ಶೇ.1ರಿಂದ 2ರಷ್ಟು ಕಡಿಮೆಯಾಗಬಹುದು. ಇತರ ಕೆಲವು ವಾಹನಗಳಲ್ಲಿ ವಾಹನದ ವರ್ಗ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಶೇ.3ರಿಂದ 6ರಷ್ಟು ಇಳಿಕೆಯಾಗಬಹುದು ಎಂದು ಸಚಿವಾಲಯ ವಿವರಿಸಿದೆ. ಎಲ್ಲ ವಾಹನಗಳಲ್ಲೂ ಶೇ.10ರಷ್ಟು ಮೈಲೇಜ್ ನಷ್ಟವಾಗುತ್ತದೆ ಎಂದು ಪರಿಗಣಿಸಿ ₹62,000 ಕೋಟಿ ಗ್ರಾಹಕ ನಷ್ಟದ ಅಂದಾಜು ಮಾಡುವುದು ವೈಜ್ಞಾನಿಕವಾಗಿ ಸಮರ್ಥನೀಯವಲ್ಲ ಎಂದು ಹೇಳಿದೆ.

ಅದೇ ರೀತಿ ವಾಹನಗಳ ದುರಸ್ತಿಗೆ ₹39,000 ಕೋಟಿ ವೆಚ್ಚವಾಗುತ್ತದೆ ಎಂಬ ಅಂದಾಜಿಗೂ ನೈಜ ವಾಹನ ಕಾರ್ಯಕ್ಷಮತೆ, ಬಿಡಿಭಾಗಗಳ ಹೊಂದಾಣಿಕೆ ಹಾಗೂ ದಾಖಲಿತ ದುರಸ್ತಿ ವೆಚ್ಚಗಳ ಆಧಾರದಲ್ಲಿ ಪುರಾವೆ ಒದಗಿಸಬೇಕು ಎಂದು ತಿಳಿಸಿದೆ.

ಎಥೆನಾಲ್ ಮಿಶ್ರಣದಿಂದ ₹1.97 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯ

ದೇಶದಲ್ಲಿ 2001ರಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯು ನಂತರ ರಾಷ್ಟ್ರೀಯ ಜೈವಿಕ ಇಂಧನ ನೀತಿ-2018 ಸೇರಿದಂತೆ ವಿವಿಧ ನೀತಿಗಳ ಮೂಲಕ ವಿಸ್ತರಣೆಗೊಂಡಿದೆ.

2014-15ರ ಎಥೆನಾಲ್ ಪೂರೈಕೆ ವರ್ಷದಿಂದ ಈ ಯೋಜನೆಯಡಿ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಸುಮಾರು 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಬದಲಿಗೆ ಎಥೆನಾಲ್ ಬಳಕೆಯಾಗಿದ್ದು, ಸುಮಾರು 952 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗಿದೆ. ರೈತರಿಗೆ ₹1.66 ಲಕ್ಷ ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

2025-26ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಅಕ್ಟೋಬರ್ 31ರವರೆಗೆ ಸಾರ್ವಜನಿಕ ವಲಯದ ತೈಲ ಕಂಪನಿಗಳು 1,089 ಕೋಟಿ ಲೀಟರ್ ಎಥೆನಾಲ್ ಖರೀದಿಸಿವೆ. ಸುಮಾರು 5,673 ಕೋಟಿ ಲೀಟರ್ ಪೆಟ್ರೋಲ್ ಮಾರಾಟದ ಎದುರು 1,134 ಕೋಟಿ ಲೀಟರ್ ಎಥೆನಾಲ್ ಮಿಶ್ರಣ ಮಾಡಲಾಗಿದೆ. ರಾಷ್ಟ್ರೀಯ ಶೇ.20ರಷ್ಟು ಮಿಶ್ರಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜಂಟಿ ಪರೀಕ್ಷೆಗೆ ತೈಲ ಕಂಪನಿಗಳ ಒತ್ತಾಯ

ಕರ್ನಾಟಕ ಸರ್ಕಾರದ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಲು ಸಂಪೂರ್ಣ ಮಾದರಿ ಸಂಗ್ರಹ ದಾಖಲೆಗಳು, ಬಂಕ್‌ವಾರು ಪ್ರಯೋಗಾಲಯ ವರದಿಗಳು ಹಾಗೂ ಪರೀಕ್ಷಾ ವಿಧಾನದ ವಿವರಗಳನ್ನು ಒದಗಿಸುವಂತೆ ಮೂರು ತೈಲ ಕಂಪನಿಗಳು ರಾಜ್ಯ ಸರ್ಕಾರವನ್ನು ಕೋರಿವೆ.

ರಾಜ್ಯ ಸರ್ಕಾರ ಮತ್ತು ತೈಲ ಕಂಪನಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಾದರಿಗಳನ್ನು ಜಂಟಿಯಾಗಿ ಸಂಗ್ರಹಿಸಿ, ಅಧಿಕೃತ ಪ್ರಯೋಗಾಲಯದಲ್ಲಿ ಸ್ವತಂತ್ರ ಪರೀಕ್ಷೆ ನಡೆಸಬೇಕು. ಇದಕ್ಕಾಗಿ ಉಳಿಸಿಟ್ಟಿರುವ ಮಾದರಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿವೆ.

ನಿಗದಿತ ಕಾನೂನು ಮತ್ತು ತಾಂತ್ರಿಕ ವಿಧಾನಗಳ ಪ್ರಕಾರ ಜಂಟಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧವಿರುವುದಾಗಿ ಕಂಪನಿಗಳು ತಿಳಿಸಿವೆ. ನಿಗದಿತ ಮಾನದಂಡಗಳ ಉಲ್ಲಂಘನೆ ದೃಢಪಟ್ಟಲ್ಲಿ ಅನ್ವಯಿಸುವ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗ್ರಾಹಕರಿಗೆ ಪೂರೈಸುವ ಪೆಟ್ರೋಲಿಯಂ ಉತ್ಪನ್ನಗಳ ಗುಣಮಟ್ಟ, ನಿಯಮಗಳ ಪಾಲನೆ ಮತ್ತು ಗ್ರಾಹಕರ ಹಿತರಕ್ಷಣೆಗೆ ಸಚಿವಾಲಯ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande