
ಬೆಂಗಳೂರು, 04 ನವೆಂಬರ್ (ಹಿ.ಸ.):
ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕವನ್ನು ಹೀಯಾಳಿಸುವ ರೀತಿಯಲ್ಲಿ ವ್ಯಂಗ್ಯವಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಅವರ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕನ್ನಡಿಗರನ್ನು ಹೀಯಾಳಿಸಿರುವ ಅಧಿಕಾರಿಯ ನಡೆ ಉದ್ಧಟತನದ ಪರಮಾವಧಿ ಎಂದು ಟೀಕಿಸಿದ್ದಾರೆ.
ಕನ್ನಡಿಗರು ಸೌಹಾರ್ದತೆ ಮತ್ತು ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರು. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಎದುರಾದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮ ಸ್ಥಾಪಿಸಿ ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡುವುದು ಅಸಹಿಷ್ಣುತೆಯ ಸಂಕೇತವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ರೀತಿಯಲ್ಲಿ ವ್ಯಂಗ್ಯದ ಪೋಸ್ಟ್ ಮಾಡಿರುವುದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ತಮಿಳುನಾಡಿನಲ್ಲಿ ತಮಿಳು ಮತ್ತು ತಮಿಳಿಗರಿಗೆ ಆದ್ಯತೆ ನೀಡುವಂತೆಯೇ ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುವುದು ಸಹಜ ನ್ಯಾಯದ ಪ್ರತೀಕವಾಗಿದೆ. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವಂತಿದೆ ಎಂದು ಟೀಕಿಸಿದ್ದಾರೆ.
ಕನ್ನಡಿಗರ ಶಕ್ತಿ, ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಅವರು ಕೂಡಲೇ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು. ತಮಿಳುನಾಡು ಸರ್ಕಾರವೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಿಂದ ಪೋಸ್ಟ್ ಅಳಿಸಬಹುದು. ಆದರೆ ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನವನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡಿಗರ ಸ್ವಾಭಿಮಾನದ ವಿಷಯದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ವಿಜಯೇಂದ್ರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.