ದುರ್ಬಲ ಆರಂಭದ ಬಳಿಕ ಚೇತರಿಸಿಕೊಂಡ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿಯಲ್ಲಿ ಏರಿಕೆ
ನವದೆಹಲಿ, 04 ನವೆಂಬರ್ (ಹಿ.ಸ.): ಜಾಗತಿಕ ಮಾರುಕಟ್ಟೆಗಳ ದುರ್ಬಲ ಸೂಚನೆಗಳ ನಡುವೆಯೂ ದೇಶೀಯ ಷೇರುಪೇಟೆಯಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿದೆ. ವಹಿವಾಟಿನ ಆರಂಭದಲ್ಲಿ ಕುಸಿತ ದಾಖಲಿಸಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ, ಬಳಿಕ ಹೂಡಿಕೆದಾರರ ಖರೀದಿ ಆಸಕ್ತಿಯಿಂದ ಚೇತರಿಸಿಕೊಂಡು
प्रतीकात्मक


ನವದೆಹಲಿ, 04 ನವೆಂಬರ್ (ಹಿ.ಸ.):

ಜಾಗತಿಕ ಮಾರುಕಟ್ಟೆಗಳ ದುರ್ಬಲ ಸೂಚನೆಗಳ ನಡುವೆಯೂ ದೇಶೀಯ ಷೇರುಪೇಟೆಯಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿದೆ. ವಹಿವಾಟಿನ ಆರಂಭದಲ್ಲಿ ಕುಸಿತ ದಾಖಲಿಸಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ, ಬಳಿಕ ಹೂಡಿಕೆದಾರರ ಖರೀದಿ ಆಸಕ್ತಿಯಿಂದ ಚೇತರಿಸಿಕೊಂಡು ಏರಿಕೆಯ ಹಾದಿಗೆ ಮರಳಿದವು.

ಸರಕು ಮತ್ತು ಸೇವಾ ಬಳಕೆ ವಲಯ ಹಾಗೂ ಬ್ಯಾಂಕಿಂಗ್ ವಲಯದ ಪ್ರಮುಖ ಕಂಪನಿಗಳ ಷೇರುಗಳ ಖರೀದಿ ಹೆಚ್ಚಾದ ಪರಿಣಾಮ ಮಾರುಕಟ್ಟೆಯಲ್ಲಿ ಚುರುಕಿನ ವಹಿವಾಟು ನಡೆಯಿತು. ಬೆಳಿಗ್ಗೆ 10 ಗಂಟೆಯ ವೇಳೆಗೆ ಸೆನ್ಸೆಕ್ಸ್‌ ಶೇ.0.44ರಷ್ಟು ಹಾಗೂ ನಿಫ್ಟಿ ಶೇ.0.43ರಷ್ಟು ಏರಿಕೆ ದಾಖಲಿಸಿದ್ದವು.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 64.74 ಅಂಕಗಳಷ್ಟು ಕುಸಿತದೊಂದಿಗೆ 76,853.11 ಅಂಕಗಳಿಗೆ ವಹಿವಾಟು ಆರಂಭಿಸಿತು. ಆದರೆ, ವಹಿವಾಟು ಆರಂಭವಾದ ಕೂಡಲೇ ಖರೀದಿ ಭರಾಟೆ ಹೆಚ್ಚಾಯಿತು. ವಿಶೇಷವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐಟಿಸಿ ಕಂಪನಿಗಳ ಷೇರುಗಳ ಏರಿಕೆ ಮಾರುಕಟ್ಟೆಗೆ ಚೇತರಿಕೆ ನೀಡಿತು. ಪರಿಣಾಮ ಸೆನ್ಸೆಕ್ಸ್‌ 77,396.04 ಅಂಕಗಳ ಗರಿಷ್ಠ ಮಟ್ಟ ತಲುಪಿತು. ಬೆಳಿಗ್ಗೆ 10 ಗಂಟೆಗೆ 335.27 ಅಂಕಗಳ ಏರಿಕೆಯೊಂದಿಗೆ 77,253.12 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಕೂಡ 68.60 ಅಂಕಗಳ ಕುಸಿತದೊಂದಿಗೆ 23,742.25 ಅಂಕಗಳಲ್ಲಿ ವಹಿವಾಟು ಆರಂಭಿಸಿತು. ಬಳಿಕ ಸರಕು ಮತ್ತು ಸೇವಾ ಬಳಕೆ, ಹಣಕಾಸು ಹಾಗೂ ವಾಹನ ತಯಾರಿಕಾ ವಲಯದ ಪ್ರಮುಖ ಕಂಪನಿಗಳ ಷೇರುಗಳ ಖರೀದಿ ಹೆಚ್ಚಾದ ಹಿನ್ನೆಲೆಯಲ್ಲಿ ನಿಫ್ಟಿ ಚೇತರಿಸಿಕೊಂಡಿತು. ಆರಂಭಿಕ ವಹಿವಾಟಿನಲ್ಲಿ 23,946.35 ಅಂಕಗಳ ಗರಿಷ್ಠ ಮಟ್ಟ ತಲುಪಿದ ನಿಫ್ಟಿ, ಬೆಳಿಗ್ಗೆ 10 ಗಂಟೆಗೆ 102.60 ಅಂಕಗಳ ಏರಿಕೆಯೊಂದಿಗೆ 23,913.45 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಒಟ್ಟು 2,832 ಕಂಪನಿಗಳ ಷೇರುಗಳಲ್ಲಿ ವಹಿವಾಟು ನಡೆಯುತ್ತಿತ್ತು. ಈ ಪೈಕಿ 1,965 ಷೇರುಗಳು ಏರಿಕೆ ದಾಖಲಿಸಿದರೆ, 867 ಷೇರುಗಳು ಕುಸಿತ ಕಂಡವು. ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ 18 ಷೇರುಗಳು ಲಾಭದೊಂದಿಗೆ ವಹಿವಾಟು ನಡೆಸಿದರೆ, 12 ಷೇರುಗಳು ನಷ್ಟದಲ್ಲಿದ್ದವು. ನಿಫ್ಟಿಯ 50 ಕಂಪನಿಗಳ ಪೈಕಿ 32 ಷೇರುಗಳು ಏರಿಕೆ ದಾಖಲಿಸಿದರೆ, 18 ಷೇರುಗಳು ಕುಸಿತ ಕಂಡವು.

ಪ್ರಮುಖ ಕಂಪನಿಗಳ ಪೈಕಿ ಐಟಿಸಿ ಷೇರು ಶೇ.3.09ರಷ್ಟು ಏರಿಕೆ ದಾಖಲಿಸಿ ಮುಂಚೂಣಿಯಲ್ಲಿತ್ತು. ಮ್ಯಾಕ್ಸ್ ಹೆಲ್ತ್‌ಕೇರ್ ಶೇ.2.65, ಭಾರತ್ ಎಲೆಕ್ಟ್ರಾನಿಕ್ಸ್ ಶೇ.2.41, ಶ್ರೀರಾಮ್ ಫೈನಾನ್ಸ್ ಶೇ.2.23 ಹಾಗೂ ಬಜಾಜ್ ಫಿನ್‌ಸರ್ವ್ ಶೇ.1.71ರಷ್ಟು ಏರಿಕೆ ಕಂಡವು.

ಇನ್ನೊಂದೆಡೆ ಕೋಲ್ ಇಂಡಿಯಾ ಶೇ.1.74, ಬಿಎಸ್‌ಇ ಲಿಮಿಟೆಡ್ ಶೇ.1.55, ಪವರ್ ಗ್ರಿಡ್ ಕಾರ್ಪೊರೇಷನ್ ಶೇ.1.01, ಇನ್ಫೋಸಿಸ್ ಶೇ.0.67 ಹಾಗೂ ಎಚ್‌ಸಿಎಲ್ ಟೆಕ್ ಶೇ.0.56ರಷ್ಟು ಕುಸಿತ ದಾಖಲಿಸಿ ನಷ್ಟದೊಂದಿಗೆ ವಹಿವಾಟು ನಡೆಸಿದವು.

ಇದಕ್ಕೂ ಹಿಂದಿನ ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,225.07 ಅಂಕಗಳ ಭಾರಿ ಏರಿಕೆಯೊಂದಿಗೆ 76,917.85 ಅಂಕಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕೂಡ 370.05 ಅಂಕಗಳ ಏರಿಕೆಯೊಂದಿಗೆ 23,810.85 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande