
ವಾರಣಾಸಿ, 28 ನವೆಂಬರ್ (ಹಿ.ಸ.):
ಭಾರತದ ಭಾಷೆಗಳು, ಪೂಜಾ ಪದ್ಧತಿಗಳು ಮತ್ತು ಸಂಸ್ಕೃತಿಗಳು ವಿಭಿನ್ನವಾಗಿದ್ದರೂ, ನಮ್ಮ ಚಿಂತನೆ, ನಾಗರಿಕತೆ ಹಾಗೂ ರಾಷ್ಟ್ರೀಯ ಭಾವನೆ ಒಂದೇ ಆಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ವಾರಾಣಸಿಯ ನಮೋಘಾಟ್ನಲ್ಲಿ ಶನಿವಾರ ಕಾಶಿ–ತಮಿಳು ಸಂಗಮದ ಐದನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ–ತಮಿಳು ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಆಸೇತು ಹಿಮಾಚಲಂ, ಗಂಗೆಯಿಂದ ಕಾವೇರಿವರೆಗೆ, ಗುಜರಾತ್ನಿಂದ ಅರುಣಾಚಲ ಪ್ರದೇಶದವರೆಗೆ ನಮ್ಮ ಗುರಿ ಒಂದೇ ಭಾರತ, ಶ್ರೇಷ್ಠ ಭಾರತ ನಿರ್ಮಾಣವಾಗಿದೆ. ನಾವು ನಮ್ಮ ತಾಯಿ, ಮಾತೃಭಾಷೆ ಮತ್ತು ಧರ್ಮದ ಜತೆಗೆ ಎಲ್ಲ ಭಾಷೆಗಳನ್ನೂ ಪ್ರೀತಿಯಿಂದ ಕಾಣಬೇಕು' ಎಂದು ಹೇಳಿದರು.
ಈ ಬಾರಿಯ ಸಂಗಮದ ವಿಶೇಷತೆಯೆಂದರೆ ತಮಿಳಿನ ಪ್ರಾಚೀನ ಗ್ರಂಥ ತಿರುಕ್ಕುರಳ್ ಮತ್ತು ಅದರ ಕರ್ತೃ ಸಂತ ತಿರುವಳ್ಳುವರ್ ಅವರಿಗೆ ವಿಶೇಷ ಆದ್ಯತೆ ನೀಡಿರುವುದು. ತಮಿಳು ಭಾಷೆ ಮತ್ತು ಸಂಸ್ಕೃತಿ ಕೇವಲ ತಮಿಳುನಾಡಿನ ಸಂಪತ್ತಲ್ಲ, ಅದು ಇಡೀ ಭಾರತದ ಹೆಮ್ಮೆಯಾಗಿದೆ. ಈ ಮಹತ್ವವನ್ನು ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ವೇದಿಕೆಗಳಿಗೂ ಪರಿಚಯಿಸಿದ್ದಾರೆ ಎಂದು ತಿಳಿಸಿದರು.
ತಮಿಳು ಮಹಾಕವಿ ಸುಬ್ರಮಣ್ಯ ಭಾರತಿ ಅವರ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿ, ಮಹಾಕವಿ ತಮ್ಮ ಜೀವನದ ಮಹತ್ವದ ಸಮಯವನ್ನು ಕಾಶಿಯಲ್ಲಿ ಕಳೆದಿದ್ದರು. ಕಾಶಿಯ ವಿದ್ವಾಂಸರ ಮಾತುಗಳನ್ನು ಕಾಂಚಿಯಲ್ಲಿ ಕುಳಿತು ಕೇಳಲು ಸಾಧ್ಯವಾಗುವಂತಹ ಸಾಧನವನ್ನು ರೂಪಿಸುವ ಕಲ್ಪನೆಯನ್ನು ಅವರು ತಮ್ಮ ಹಾಡಿನಲ್ಲಿ ವ್ಯಕ್ತಪಡಿಸಿದ್ದರು. ಅವರ ದೂರದೃಷ್ಟಿಯ ಕನಸು ಇಂದು ತಂತ್ರಜ್ಞಾನದ ಮೂಲಕ ಸಾಕಾರಗೊಳ್ಳುತ್ತಿದೆ. ಕಾಶಿ ಮತ್ತು ತಮಿಳುನಾಡಿನ ನಡುವಿನ ಜ್ಞಾನ, ಭಾಷೆ ಹಾಗೂ ಸಂಸ್ಕೃತಿಯ ಆಳವಾದ ಸಂಬಂಧಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದರು.
ಕಾಶಿ ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದ್ದು, ತಮಿಳು ಭಾಷಿಕರ ಹೃದಯದಲ್ಲಿ ಅದಕ್ಕೆ ವಿಶೇಷ ಸ್ಥಾನವಿದೆ. ಪ್ರತಿಯೊಬ್ಬ ತಮಿಳುವಾಸಿಯ ಮನಸ್ಸಿನಲ್ಲೂ ಕಾಶಿಯ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸಬೇಕು ಮತ್ತು ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕು ಎಂಬ ಎರಡು ಪ್ರಮುಖ ಆಸೆಗಳಿರುತ್ತವೆ. ಸುಮಾರು 400 ವರ್ಷಗಳ ಹಿಂದೆ ತಮಿಳುನಾಡಿನಿಂದ ಬಂದು ಕಾಶಿಯಲ್ಲಿ ನೆಲೆಸಿದವರು ಈ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ್ದಾರೆ. ತಮಿಳುನಾಡಿನಿಂದ ಬಂದ ನೇಕಾರರು ತಮ್ಮ ಕಲೆ ಮತ್ತು ಕೌಶಲದ ಮೂಲಕ ಇಲ್ಲಿಯೂ ವಿಶೇಷ ಗುರುತನ್ನು ಮೂಡಿಸಿ, ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ್ದಾರೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಗೂ ಮುನ್ನ ನವದೆಹಲಿಯ ಭಾರತ ಮಂಟಪದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ತಿರುಕ್ಕುರಳ್ ಗ್ರಂಥದ ರಷ್ಯನ್ ಭಾಷೆಯ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದನ್ನು ಉಪರಾಷ್ಟ್ರಪತಿ ಸ್ಮರಿಸಿದರು. ತಿರುವಳ್ಳುವರ್ ಅವರ ಈ ಪ್ರಾಚೀನ ಕೃತಿಯಲ್ಲಿ 1,330 ದ್ವಿಪದಿಗಳಿದ್ದು, ಸದಾಚಾರ, ಉತ್ತಮ ಆಡಳಿತ, ನೈತಿಕತೆ, ಸಂಪತ್ತು ಮತ್ತು ಮಾನವ ಸಂಬಂಧಗಳ ಕುರಿತು ಅಮೂಲ್ಯವಾದ ಸಂದೇಶಗಳಿವೆ. ತಿರುವಳ್ಳುವರ್ ಅವರ ಜ್ಞಾನ ಪರಂಪರೆ ಯಾವುದೇ ಒಂದು ಭಾಷೆ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅದು ಇಡೀ ಮಾನವಕುಲಕ್ಕೆ ಉಪಯುಕ್ತವಾಗಿದೆ ಎಂದರು.
ಬ್ರಿಟಿಷರು ಭಾರತವನ್ನು ಒಂದುಗೂಡಿಸಲಿಲ್ಲ. ದೇಶದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಏಕತೆ ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು. ಈ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಕಾಶಿ–ತಮಿಳು ಸಂಗಮಕ್ಕೆ ಚಾಲನೆ ನೀಡಿದ್ದಾರೆ. ಭಾರತ ಸಾಗುತ್ತಿರುವ ಅಭಿವೃದ್ಧಿಯ ವೇಗವನ್ನು ಗಮನಿಸಿದರೆ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸುವುದನ್ನು ಜಗತ್ತಿನ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ. ಆರ್ಥಿಕ ಅಭಿವೃದ್ಧಿಯ ಜತೆಗೆ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನೂ ಜಗತ್ತಿಗೆ ಪರಿಚಯಿಸಬೇಕು ಎಂದು ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿ, ಹಿಂದೆ ಹಿಂದುಳಿದ ರಾಜ್ಯವೆಂಬ ಗುರುತನ್ನು ಹೊಂದಿದ್ದ ಉತ್ತರ ಪ್ರದೇಶ ಈಗ ನಿರಂತರ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಇಂದು ದೇಶದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಸುಮಾರು ಶೇ.9ರಷ್ಟು ಕೊಡುಗೆ ನೀಡುತ್ತಿದೆ. 2029ರ ವೇಳೆಗೆ ಒಂದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಉತ್ತರ ಪ್ರದೇಶ ನಿಗದಿತ ಸಮಯಕ್ಕಿಂತ ಮುಂಚೆಯೇ ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗಿನ ತಮ್ಮ 20 ವರ್ಷಗಳ ಒಡನಾಟವನ್ನು ಸ್ಮರಿಸಿದ ಅವರು, 1998ರಲ್ಲಿ ನಾವಿಬ್ಬರೂ ಸಂಸತ್ತಿನಲ್ಲಿ ಅಕ್ಕಪಕ್ಕ ಕುಳಿತು ಪರಸ್ಪರರ ಭಾಷಣಗಳನ್ನು ಗಮನವಿಟ್ಟು ಆಲಿಸುತ್ತಿದ್ದೆವು ಎಂದು ಹೇಳಿದರು.
ನದಿಗಳ ಜೋಡಣೆ ವಿಚಾರವಾಗಿಯೂ ಮಾತನಾಡಿದ ಅವರು, ಗಂಗಾ ನದಿಯ ನೀರನ್ನು ಕಾವೇರಿವರೆಗೆ ತಲುಪಿಸುವ ಗುರಿ ದೇಶದ ಏಕತೆ ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಈ ನಿಟ್ಟಿನಲ್ಲಿ ಗೋದಾವರಿ ನದಿಯ ನೀರನ್ನು ಕಾವೇರಿಗೆ ಹರಿಸುವ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
-------
ಹಿಂದೂಸ್ತಾನ್ ಸಮಾಚಾರ್ / Rakesh.M.B.