
ಬೆಂಗಳೂರು, 27 ನವೆಂಬರ್ (ಹಿ.ಸ.):
ನಿಜವಾದ ಆಧ್ಯಾತ್ಮಿಕತೆ ಎಂದರೆ ಕೇವಲ ದೇವರ ಆರಾಧನೆಗೆ ಸೀಮಿತವಾಗಿಲ್ಲ. ಜನರ ಸೇವೆ ಮಾಡುವುದೇ ನಿಜವಾದ ಆಧ್ಯಾತ್ಮಿಕತೆಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಬಿಜಿಎಸ್ ಮತ್ತು ಎಸ್ಜೆಬಿ ಸಮೂಹದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಬಡವರಿಗೆ ಅನ್ನದಾನ ಮಾಡುವ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಭರವಸೆ ಮತ್ತು ಆಸರೆಯನ್ನು ಮೂಡಿಸುತ್ತಿದೆ. 'ಮಾನವ ಸೇವೆಯೇ ಮಾಧವ ಸೇವೆ' ಎಂಬ ತತ್ವವನ್ನು ಮಠದ ಕಾರ್ಯಗಳು ಪ್ರತಿಬಿಂಬಿಸುತ್ತಿವೆ ಎಂದು ಹೇಳಿದರು.
ಆಧ್ಯಾತ್ಮಿಕತೆಯು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು, ಮೌಲ್ಯಗಳಿಗೆ ಬದ್ಧರಾಗಿರಲು ಮತ್ತು ಉತ್ತಮ ಮನುಷ್ಯರಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಇದು ನಮ್ಮ ಜವಾಬ್ದಾರಿಗಳಿಂದ ದೂರವಿಡುವುದಿಲ್ಲ. ಬದಲಾಗಿ, ಹೆಚ್ಚಿನ ಉದ್ದೇಶ ಮತ್ತು ಸಂವೇದನಾಶೀಲತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸುವ ಜ್ಞಾನವನ್ನು ನೀಡುತ್ತದೆ ಎಂದು ತಿಳಿಸಿದರು.
ಭಾರತದ ಆರೋಗ್ಯ ವ್ಯವಸ್ಥೆಯು ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಕೈಗೆಟುಕುವಂತಾಗುತ್ತಿದೆ. ಆರೋಗ್ಯ ವಿಮಾ ಸೌಲಭ್ಯಗಳ ವಿಸ್ತರಣೆ, ಕಡಿಮೆ ಬೆಲೆಯ ಔಷಧಗಳ ಲಭ್ಯತೆ, ವೈದ್ಯಕೀಯ ಕಾಲೇಜುಗಳ ಹೆಚ್ಚಳ ಹಾಗೂ ಉತ್ತಮ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿಯಿಂದ ಆರೋಗ್ಯ ಸೇವೆ ಸುಲಭವಾಗಿ ದೊರೆಯುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಜನೌಷಧಿ ಕೇಂದ್ರಗಳ ಮೂಲಕ ದೇಶದ ಕೋಟ್ಯಂತರ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸಲಾಗುತ್ತಿದೆ ಎಂದರು.
ಭಾರತವು ಈಗ ಸುಧಾರಿತ ಆರೋಗ್ಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ, ಅವುಗಳನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸುವತ್ತ ಮುನ್ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಎಂಆರ್‌ಐ ಯಂತ್ರಗಳು ಹಾಗೂ ಕಡಿಮೆ ವೆಚ್ಚದ ಸಿಎಆರ್-ಟಿ ಕೋಶ ಚಿಕಿತ್ಸೆಯಂತಹ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ಜಾಗತಿಕ ಆರೋಗ್ಯ ಕ್ಷೇತ್ರದ ಭವಿಷ್ಯ ರೂಪಿಸುವ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಭಾರತದ ಶ್ರೀಮಂತ ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗೆ ಜಾಗತಿಕ ಮಟ್ಟದಲ್ಲಿ ಮತ್ತೆ ಮನ್ನಣೆ ದೊರೆಯುತ್ತಿದೆ. ಆಯುಷ್ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ, ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಜಾಗತಿಕ ಕೇಂದ್ರ ಸ್ಥಾಪಿಸುವ ಮೂಲಕ ಭಾರತದ ಪುರಾತನ ವೈದ್ಯಕೀಯ ಜ್ಞಾನವನ್ನು ಜಗತ್ತಿಗೆ ಪರಿಚಯಿಸಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.