ಕೇಜ್ರಿವಾಲ್ ಅವರ ‘ಶೀಶ್ ಮಹಲ್’ ಸಾರ್ವಜನಿಕರ ವೀಕ್ಷಣೆಗೆ ಮುಕ್ತ: ಬೆಲೆ ಸಹಿತ ದುಬಾರಿ ಪೀಠೋಪಕರಣಗಳ ಪ್ರದರ್ಶನ
ನವದೆಹಲಿ, 27 ನವೆಂಬರ್ (ಹಿ.ಸ.): ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ಸರ್ಕಾರಿ ನಿವಾಸವಾಗಿದ್ದ ‘ಶೀಶ್ ಮಹಲ್’ ಅನ್ನು ದೆಹಲಿ ಸರ್ಕಾರ ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದೆ. ನಿವಾಸದಲ್ಲಿರುವ ದುಬಾರಿ ಪೀಠೋಪಕರಣಗಳು ಹಾಗೂ ಇತರ ವಸ್ತುಗಳನ್ನು ಅವುಗಳ ಖರೀದಿ ಬೆ
शीश महल के अंदर की तस्वीर


ನವದೆಹಲಿ, 27 ನವೆಂಬರ್ (ಹಿ.ಸ.):

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ಸರ್ಕಾರಿ ನಿವಾಸವಾಗಿದ್ದ ‘ಶೀಶ್ ಮಹಲ್’ ಅನ್ನು ದೆಹಲಿ ಸರ್ಕಾರ ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದೆ. ನಿವಾಸದಲ್ಲಿರುವ ದುಬಾರಿ ಪೀಠೋಪಕರಣಗಳು ಹಾಗೂ ಇತರ ವಸ್ತುಗಳನ್ನು ಅವುಗಳ ಖರೀದಿ ಬೆಲೆಯೊಂದಿಗೆ ಪ್ರದರ್ಶಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಜನರ ಬೆವರು ಮತ್ತು ರಕ್ತದಿಂದ ಸಂಪಾದಿಸಿದ ತೆರಿಗೆ ಹಣದಲ್ಲಿ ನಿರ್ಮಿಸಲಾದ ಐಷಾರಾಮಿ ‘ಶೀಶ್ ಮಹಲ್’ ಅನ್ನು ದೆಹಲಿಯ ಜನರಷ್ಟೇ ಅಲ್ಲದೆ, ಪಂಜಾಬ್‌ನ ಜನರೂ ನೋಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣದ ಸಂಪೂರ್ಣ ಸತ್ಯಾಂಶ ದೆಹಲಿ ಮತ್ತು ಪಂಜಾಬ್ ಜನರಿಗೆ ತಿಳಿಯಬೇಕು ಎಂದು ತಿಳಿಸಿದ್ದಾರೆ.

ದೆಹಲಿ ಲೋಕೋಪಯೋಗಿ ಸಚಿವ ಪ್ರವೇಶ ಸಾಹಿಬ್ ಸಿಂಗ್ ಪತ್ರಕರ್ತರೊಂದಿಗೆ ಮಾತನಾಡಿ, ತೆರಿಗೆದಾರರ ಹಣವನ್ನು ಎಲ್ಲಿ ಮತ್ತು ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ಸಂಪೂರ್ಣ ಲೆಕ್ಕವನ್ನು ಪ್ರತಿಯೊಂದು ಸರ್ಕಾರವೂ ಜನರಿಗೆ ನೀಡಬೇಕು ಎಂದರು.

ದೆಹಲಿ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಹಿಂದಿನ ಮುಖ್ಯಮಂತ್ರಿ ಯಾವ ರೀತಿಯ ಪೀಠೋಪಕರಣಗಳ ಖರೀದಿಗೆ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಈ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪ್ರದರ್ಶನದಲ್ಲಿರುವ ಪ್ರತಿಯೊಂದು ವಸ್ತುವಿನ ಬೆಲೆಯ ಜತೆಗೆ ಅದರ ಬಿಲ್ ಮತ್ತು ಸರಕುಪಟ್ಟಿ ಸಂಖ್ಯೆಯನ್ನೂ ನಮೂದಿಸಲಾಗಿದೆ. ಮನೆಯಲ್ಲಿರುವ ಯಾವುದೇ ವಸ್ತುವನ್ನು ಸ್ಥಳಾಂತರಿಸದೆ, ಮೊದಲಿನ ಸ್ಥಿತಿಯಲ್ಲಿಯೇ ಇರಿಸಲಾಗಿದೆ ಎಂದು ಹೇಳಿದರು.

ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಮಾತನಾಡಿ, ಮಾಧ್ಯಮಗಳ ಮೂಲಕ ದೇಶದ ಜನರು ಈ ನಿವಾಸದಲ್ಲಿರುವ ವಸ್ತುಗಳನ್ನು ಹಾಗೂ ಅವುಗಳ ಖರೀದಿಗೆ ವೆಚ್ಚ ಮಾಡಿರುವ ಹಣವನ್ನು ನೋಡಲಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಿಶ್ವದ ವಿವಿಧ ದೇಶಗಳಿಂದ ತರಿಸಲಾಗಿದೆ ಎಂದು ಆರೋಪಿಸಿದರು.

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಆಮ್ಲಜನಕದ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾಗ, ಕೇಜ್ರಿವಾಲ್ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಐಷಾರಾಮಿ ನಿವಾಸ ನಿರ್ಮಾಣದಲ್ಲಿ ತೊಡಗಿದ್ದರು ಎಂದು ದೂರಿದರು.

ಒಂದು ಕೊಠಡಿಯ ಮನೆಯಲ್ಲಿ ವಾಸಿಸುವುದಾಗಿ ಹೇಳುತ್ತಿದ್ದ ವ್ಯಕ್ತಿ, ವಿವಿಧ ದೇಶಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ತರಿಸಿ ನಿವಾಸದಲ್ಲಿ ಅಳವಡಿಸಿಕೊಂಡಿದ್ದಾರೆ. ಜನರ ತೆರಿಗೆ ಹಣವನ್ನು ಐಷಾರಾಮಿ ಸೌಲಭ್ಯಗಳಿಗಾಗಿ ಹೇಗೆ ಬಳಸಲಾಗಿದೆ ಎಂಬುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿದೆ ಎಂದು ಕಪಿಲ್ ಮಿಶ್ರಾ ಆರೋಪಿಸಿದರು.

ಇಟಲಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿಮಣಿಯನ್ನು ತರಿಸಲಾಗಿದ್ದು, ವಿವಿಧ ದೇಶಗಳಿಂದ ಸುಮಾರು 31 ಲಕ್ಷ ರೂಪಾಯಿ ಮೌಲ್ಯದ ಪಾತ್ರೆಗಳನ್ನು ಖರೀದಿಸಲಾಗಿದೆ. ಫ್ರಿಜ್‌ನಲ್ಲಿಯೂ ಅಂತರ್ಜಾಲ ಮತ್ತು ದೂರದರ್ಶನ ಸೌಲಭ್ಯಗಳಿವೆ ಎಂದು ಅವರು ವಿವರಿಸಿದರು. ಕೊರೊನಾ ಕಾಲದಲ್ಲಿ ದೆಹಲಿಯ ಜನರೊಂದಿಗೆ ಇಂತಹ ಕೃತ್ಯ ಎಸಗಲಾಗಿದೆ ಎಂದು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande