ಹಿಂದೂ ಮಹಾಸಾಗರದಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿ ಖಚಿತಪಡಿಸುವುದು ಎಲ್ಲ ರಾಷ್ಟ್ರಗಳ ಸಾಮೂಹಿಕ ಹೊಣೆ: ಜೈಶಂಕರ್
ನವದೆಹಲಿ, 27 ನವೆಂಬರ್ (ಹಿ.ಸ.): ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಭದ್ರತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸುವುದು ಎಲ್ಲ ಸದಸ್ಯ ರಾಷ್ಟ್ರಗಳ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಹಿಂದೂ ಮಹಾಸಾಗರ ವ
विदेश मंत्री एस. जयशंकर ने शुक्रवार को यहां आईओआरए की 25वीं मंत्रिपरिषद बैठक की अध्यक्षता करते हुए


ನವದೆಹಲಿ, 27 ನವೆಂಬರ್ (ಹಿ.ಸ.):

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಭದ್ರತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸುವುದು ಎಲ್ಲ ಸದಸ್ಯ ರಾಷ್ಟ್ರಗಳ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ನಡೆದ ಹಿಂದೂ ಮಹಾಸಾಗರ ವಲಯ ಸಂಘಟನೆಯ (ಐಒಆರ್‌ಎ) 25ನೇ ಸಚಿವರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಉದ್ಘಾಟನಾ ಭಾಷಣ ಮಾಡಿದ ಅವರು, ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಸಂಘಟನೆಯು ತನ್ನ ಸಾಮೂಹಿಕ ಧ್ವನಿಯನ್ನು ಬಲಪಡಿಸಿಕೊಳ್ಳಬೇಕು ಮತ್ತು ಸಮಗ್ರ ಪ್ರಾದೇಶಿಕ ವೇದಿಕೆಯಾಗಿ ತನ್ನ ಪಾತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.

ಜಾಗತಿಕ ವ್ಯಾಪಾರ, ಇಂಧನ ಭದ್ರತೆ, ಸಂಪರ್ಕ ವ್ಯವಸ್ಥೆ ಮತ್ತು ಆರ್ಥಿಕ ಸಮೃದ್ಧಿಯ ದೃಷ್ಟಿಯಿಂದ ಹಿಂದೂ ಮಹಾಸಾಗರ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಈ ಪ್ರದೇಶವು ಅಪಾರ ವೈವಿಧ್ಯತೆ, ಅವಕಾಶಗಳು ಹಾಗೂ ಸಾಮಾನ್ಯ ಸವಾಲುಗಳನ್ನು ಹೊಂದಿದೆ. ಹೀಗಾಗಿ, ಅದನ್ನು ಶಾಂತಿಯುತ, ಸ್ಥಿರ ಮತ್ತು ಸುರಕ್ಷಿತವಾಗಿಡುವುದರ ಜತೆಗೆ ಅಭಿವೃದ್ಧಿಗೆ ಪೂರಕವಾಗಿಸುವುದು ಎಲ್ಲ ರಾಷ್ಟ್ರಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಐಒಆರ್‌ಎ ಸಂಘಟನೆಯ ಬಗ್ಗೆ ಭಾರತದ ನಿಲುವು ಮತ್ತು ಅಧ್ಯಕ್ಷತೆಯ ಕಾರ್ಯಯೋಜನೆಯು 'ವಿಷನ್ ಸಾಗರ' ಮಾರ್ಗದರ್ಶನದಲ್ಲಿ ರೂಪುಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಭದ್ರತೆ ಮತ್ತು ಅಭಿವೃದ್ಧಿಗಾಗಿ ಪರಸ್ಪರ ಹಾಗೂ ಸಮಗ್ರ ಪ್ರಗತಿಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ಭಾರತ ಈ ಹಿಂದೆ ಪ್ರತಿಪಾದಿಸಿದ್ದ 'ಸಾಗರ' (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ಧಿ) ಪರಿಕಲ್ಪನೆಯನ್ನು ಮತ್ತಷ್ಟು ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.

ಹಿಂದೂ ಮಹಾಸಾಗರ ಪ್ರದೇಶದಲ್ಲಿ 'ನಾವೀನ್ಯತೆ, ಮುಕ್ತತೆ, ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆ ಸಾಮರ್ಥ್ಯ' ಎಂಬುದು ಭಾರತದ ಅಧ್ಯಕ್ಷತೆಯ ಧ್ಯೇಯವಾಕ್ಯವಾಗಿದೆ. ಬದಲಾಗುತ್ತಿರುವ ಪ್ರಾದೇಶಿಕ ಮತ್ತು ಜಾಗತಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಐಒಆರ್‌ಎ ಸಂಘಟನೆ ಹೊಂದಿಕೊಳ್ಳಬೇಕು ಹಾಗೂ ತನ್ನ ಸದಸ್ಯ ರಾಷ್ಟ್ರಗಳಿಗೆ ಸ್ಪಷ್ಟವಾದ ಪ್ರಯೋಜನಗಳನ್ನು ಒದಗಿಸಬೇಕು ಎಂಬ ನಂಬಿಕೆಯನ್ನು ಈ ತತ್ವಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಐಒಆರ್‌ಎಯ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವುದು, ಸಂವಾದ ಪಾಲುದಾರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಪ್ರಾಯೋಗಿಕ ಪ್ರಾದೇಶಿಕ ಉಪಕ್ರಮಗಳಿಗೆ ಉತ್ತೇಜನ ನೀಡುವುದು ಹಾಗೂ ಸಂಘಟನೆಯ ಆರ್ಥಿಕ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಜೈಶಂಕರ್ ವಿವರಿಸಿದರು.

ಪ್ರಾದೇಶಿಕ ಮಟ್ಟದಲ್ಲಿ ತನ್ನ ವ್ಯಾಪಕ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಐಒಆರ್‌ಎ ಸಂಘಟನೆಯ ಸಾಂಸ್ಥಿಕ ಅಡಿಪಾಯವನ್ನು ಬಲಪಡಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ 'ಬಲಿಷ್ಠ ಪ್ರಾದೇಶಿಕ ಧ್ವನಿ: ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಐಒಆರ್‌ಎಯ ಸ್ಥಾನ' ಎಂಬ ಸಭೆಯ ವಿಷಯ ಹೆಚ್ಚು ಪ್ರಸ್ತುತವಾಗಿದೆ ಎಂದರು.

ಪ್ರಮುಖ ಭೌಗೋಳಿಕ ರಾಜಕೀಯ ಬದಲಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಸಮನ್ವಯ, ಸಂವಾದ ಪಾಲುದಾರರೊಂದಿಗೆ ಅರ್ಥಪೂರ್ಣ ಸಹಕಾರ ಮತ್ತು ಪ್ರಾಯೋಗಿಕ ಪ್ರಾದೇಶಿಕ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಮೂಲಕ ಸಂಘಟನೆಯ ಸಾಮೂಹಿಕ ಧ್ವನಿಯನ್ನು ಬಲಪಡಿಸಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ನಡೆಯುವ ಚರ್ಚೆಗಳು ಈ ಉದ್ದೇಶಗಳನ್ನು ಸಾಕಾರಗೊಳಿಸಲು ನೆರವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ರಚನಾತ್ಮಕ ಚರ್ಚೆ ನಡೆಸಿ ಅಮೂಲ್ಯ ಸಲಹೆಗಳನ್ನು ನೀಡುವಂತೆ ಪ್ರತಿನಿಧಿಗಳಿಗೆ ಕರೆ ನೀಡಿದರು.

ಸಭೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿಯೂ ಸಂತಸ ವ್ಯಕ್ತಪಡಿಸಿರುವ ಜೈಶಂಕರ್, ತಮ್ಮ ಉದ್ಘಾಟನಾ ಭಾಷಣದಲ್ಲಿ ಹಿಂದೂ ಮಹಾಸಾಗರದ ಕಾರ್ಯತಂತ್ರ ಮತ್ತು ಆರ್ಥಿಕ ಮಹತ್ವ, ಭಾರತದ 'ವಿಷನ್ ಸಾಗರ' ಹಾಗೂ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಐಒಆರ್‌ಎಯನ್ನು ಬಲಿಷ್ಠ ಪ್ರಾದೇಶಿಕ ವೇದಿಕೆಯನ್ನಾಗಿ ರೂಪಿಸುವ ಅಗತ್ಯವನ್ನು ಒತ್ತಿಹೇಳಿರುವುದಾಗಿ ತಿಳಿಸಿದ್ದಾರೆ.

ಐಒಆರ್‌ಎ ಸಂಘಟನೆಯ ಹಿಂದಿನ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀಲಂಕಾವನ್ನು ಜೈಶಂಕರ್ ಶ್ಲಾಘಿಸಿದರು. ಸಂಘಟನೆಯ ಉಪಾಧ್ಯಕ್ಷ ಹಾಗೂ ಮುಂದಿನ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿರುವ ಮಾರಿಷಸ್‌ ಅನ್ನು ಸ್ವಾಗತಿಸಿದರು. ಸಾಮಾನ್ಯ ಉದ್ದೇಶಗಳನ್ನು ಈಡೇರಿಸಲು ಎರಡೂ ರಾಷ್ಟ್ರಗಳು ಸೇರಿದಂತೆ ಸಂಘಟನೆಯ ಎಲ್ಲ ಪಾಲುದಾರರೊಂದಿಗೆ ಸಹಕರಿಸಲು ಭಾರತ ಉತ್ಸುಕವಾಗಿದೆ ಎಂದು ತಿಳಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಐಒಆರ್‌ಎಯ ಮೊದಲ ಸಚಿವರ ಮಂಡಳಿ ಸಭೆ ಇದಾಗಿದೆ. ಸಂಘಟನೆಯ ಸದಸ್ಯ ರಾಷ್ಟ್ರಗಳು, ಸಂವಾದ ಪಾಲುದಾರರು, ತಜ್ಞ ಸಂಸ್ಥೆಗಳು, ವೀಕ್ಷಕರು ಹಾಗೂ ಇತರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande