ಬೆಂಗಳೂರಿನಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರ ದುರ್ಮರಣ
ಬೆಂಗಳೂರು, 02 ನವೆಂಬರ್ (ಹಿ.ಸ.): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು, ಭಾನುವಾರ ರಾತ್ರಿ ನಗರದ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಖಾಸಗಿ ಕಂಪನಿ ಉದ್ಯೋಗಿ, ಆಹಾರ ವಿತರಣಾ ಸಿಬ್ಬಂದಿ ಹಾಗೂ ಸರಕು ವಾಹನ ಚಾಲಕ ಸೇರಿ ಮೂವರು ಮೃತಪಟ್ಟಿದ್ದಾ
Bng accident


ಬೆಂಗಳೂರು, 02 ನವೆಂಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು, ಭಾನುವಾರ ರಾತ್ರಿ ನಗರದ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಖಾಸಗಿ ಕಂಪನಿ ಉದ್ಯೋಗಿ, ಆಹಾರ ವಿತರಣಾ ಸಿಬ್ಬಂದಿ ಹಾಗೂ ಸರಕು ವಾಹನ ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.

ಎಚ್ಎಸ್ಆರ್ ಲೇಔಟ್, ಜೆ.ಪಿ. ನಗರ ಹಾಗೂ ನೈಸ್ ರಸ್ತೆಯಲ್ಲಿ ಈ ದುರ್ಘಟನೆಗಳು ಸಂಭವಿಸಿದ್ದು, ಆಯಾ ವ್ಯಾಪ್ತಿಯ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಎಚ್ಎಸ್ಆರ್ ಲೇಔಟ್ನ 14ನೇ ಮುಖ್ಯರಸ್ತೆಯ ಅಪೊಲೊ ಕ್ಲಿನಿಕ್ ಸಮೀಪ ಮುಂಜಾನೆ ಸುಮಾರು 3.30ರ ವೇಳೆಗೆ ಮೊದಲ ಅಪಘಾತ ಸಂಭವಿಸಿದೆ. 26 ವರ್ಷದ ಸಾಹಿತ್ಯ ರಾಜ್ ಅವರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸಾಹಿತ್ಯ ರಾಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಇಂದಿರಾನಗರ ನಿವಾಸಿಯಾಗಿದ್ದ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಈ ಕುರಿತು ಎಚ್ಎಸ್ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಜೆ.ಪಿ. ನಗರದ ಪುಟ್ಟೇನಹಳ್ಳಿ ಪಾಳ್ಯ ರಸ್ತೆಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ 33 ವರ್ಷದ ಆಹಾರ ವಿತರಣಾ ಸಿಬ್ಬಂದಿ ಸುರೇಶ್ ಮೃತಪಟ್ಟಿದ್ದಾರೆ.

ರಾತ್ರಿ ಸುಮಾರು 12.15ರ ವೇಳೆಗೆ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬೆತಮಂಗಲ ಮೂಲದ ಅವರು ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. ಜೆ.ಪಿ. ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೈಸ್ ರಸ್ತೆಯ ಬನ್ನೇರುಘಟ್ಟ ಟೋಲ್ ಸಮೀಪ ಮುಂಜಾನೆ ಸುಮಾರು 4 ಗಂಟೆಗೆ ಮೂರನೇ ಅಪಘಾತ ಸಂಭವಿಸಿದೆ. 19 ವರ್ಷದ ಸರಕು ವಾಹನ ಚಾಲಕ ಗಣೇಶ್ ಕುಮಾರ್ ಚಲಾಯಿಸುತ್ತಿದ್ದ ವಾಹನವು ಮುಂದೆ ಸಾಗುತ್ತಿದ್ದ ಮತ್ತೊಂದು ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದ ಗಣೇಶ್ ಕುಮಾರ್ ಸಾವಿನ ಕುರಿತು ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರು ಪ್ರಕರಣಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande