ಭಾರತ–ಅಮೆರಿಕ ಆರ್ಥಿಕ ಸಹಕಾರಕ್ಕೆ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳೇ ಬಲವಾದ ಅಡಿಪಾಯ: ಓಂ ಬಿರ್ಲಾ
ನವದೆಹಲಿ, 19 ನವೆಂಬರ್ (ಹಿ.ಸ.): ಭಾರತ ಮತ್ತು ಅಮೆರಿಕ ಹಂಚಿಕೊಂಡಿರುವ ಪ್ರಜಾಪ್ರಭುತ್ವ ಮೌಲ್ಯಗಳು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಹಾಗೂ ತಾಂತ್ರಿಕ ಸಹಕಾರ ವಿಸ್ತರಣೆಗೆ ಬಲವಾದ ಅಡಿಪಾಯ ಒದಗಿಸುತ್ತವೆ ಎಂದು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ. ನವದೆಹಲಿಯಲ್ಲಿ ಗುರುವಾರ ನಡೆದ 23ನೇ ಭಾರ
लोकसभा अध्यक्ष ओम बिरला के साथ अन्य लोग मौजूद।


ನವದೆಹಲಿ, 19 ನವೆಂಬರ್ (ಹಿ.ಸ.):

ಭಾರತ ಮತ್ತು ಅಮೆರಿಕ ಹಂಚಿಕೊಂಡಿರುವ ಪ್ರಜಾಪ್ರಭುತ್ವ ಮೌಲ್ಯಗಳು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಹಾಗೂ ತಾಂತ್ರಿಕ ಸಹಕಾರ ವಿಸ್ತರಣೆಗೆ ಬಲವಾದ ಅಡಿಪಾಯ ಒದಗಿಸುತ್ತವೆ ಎಂದು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಡೆದ 23ನೇ ಭಾರತ–ಅಮೆರಿಕ ಆರ್ಥಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಸಂಸ್ಥೆಗಳು, ಸ್ಥಿರ ನೀತಿಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹಾಗೂ ವಿವಿಧ ಪಾಲುದಾರರೊಂದಿಗೆ ನಿರಂತರ ಸಂವಾದವು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತವೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

ಬಲಿಷ್ಠ ಹಾಗೂ ಕ್ರಿಯಾಶೀಲ ಪ್ರಜಾಪ್ರಭುತ್ವ ಸಂಸ್ಥೆಗಳು ಸ್ಥಿರ ಮತ್ತು ಸ್ಪಂದನಶೀಲ ನೀತಿ ನಿರೂಪಣೆಗೆ ನೆರವಾಗುತ್ತವೆ. ಪ್ರಜಾಪ್ರಭುತ್ವವು ವಿಭಿನ್ನ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸುತ್ತದೆ. ಉದ್ಯಮ, ವ್ಯಾಪಾರ, ಕೃಷಿ, ತಂತ್ರಜ್ಞಾನ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ನೀತಿ ಮತ್ತು ಕಾನೂನು ರೂಪಿಸುವಾಗ ಪರಿಗಣಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸ್ಥಿರ ನೀತಿ ವಾತಾವರಣ ಹಾಗೂ ಉದ್ಯಮ ವಲಯ ಮತ್ತು ನೀತಿ ನಿರೂಪಕರ ನಡುವಿನ ನಿರಂತರ ಸಂವಾದವು ಹೂಡಿಕೆಯನ್ನು ಉತ್ತೇಜಿಸುವುದರ ಜತೆಗೆ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಕೌಶಲ ಹೊಂದಿದ ಮಾನವ ಸಂಪನ್ಮೂಲವು ಇಂತಹ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ವಿಪುಲ ಅವಕಾಶಗಳನ್ನು ಒದಗಿಸುತ್ತದೆ ಎಂದರು.

ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲು ಉದ್ಯಮ ವಲಯ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ನಿಕಟ ಸಹಕಾರ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ವಿಶ್ವವಿದ್ಯಾಲಯಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಉದ್ಯಮಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಂಶೋಧನಾ ಕ್ಷೇತ್ರದಲ್ಲಿ ಉದ್ಯಮ ವಲಯದ ಹೂಡಿಕೆಯು ಜಾಗತಿಕ ತಾಂತ್ರಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ. ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಬಲವಾದ ಪಾಲುದಾರಿಕೆಯು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸ್ಪರ್ಧಾತ್ಮಕತೆ ಹೆಚ್ಚಳ ಹಾಗೂ ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತ ನಾಯಕತ್ವ ಸಾಧಿಸಲು ನೆರವಾಗಲಿದೆ ಎಂದು ಹೇಳಿದರು.

ಭಾರತದ ಔಷಧಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ ವ್ಯಾಪಕ ಮನ್ನಣೆ ದೊರೆತಿದೆ. ಆರೋಗ್ಯ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಔಷಧ ತಯಾರಿಕಾ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನೆ ನಡೆಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ಹಾಗೂ ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯು ನಾವೀನ್ಯತೆಗೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಪ್ರಗತಿ ಕಂಡಿದೆ. ರಕ್ಷಣಾ ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳಲ್ಲಿಯೂ ದೇಶದ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ಬಿರ್ಲಾ ಹೇಳಿದರು.

ಭಾರತದ ಯುವಜನರ ಆಲೋಚನೆಗಳು, ಕೌಶಲಗಳು ಮತ್ತು ನಾವೀನ್ಯತೆಯ ಸಾಮರ್ಥ್ಯಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ವಿಸ್ತರಿಸುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯು ಜಾಗತಿಕ ಸವಾಲುಗಳಿಗೆ ಹಲವು ಪರಿಹಾರಗಳನ್ನು ಒದಗಿಸಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳೂ ಹೂಡಿಕೆ, ತಾಂತ್ರಿಕ ಸಹಕಾರ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳನ್ನು ಹೊಂದಿವೆ ಎಂದರು.

ಕೈಗಾರಿಕಾ ಅಭಿವೃದ್ಧಿ, ದತ್ತಾಂಶ ಕೇಂದ್ರಗಳ ವಿಸ್ತರಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಹೂಡಿಕೆಗಳಿಂದ ಇಂಧನದ ಬೇಡಿಕೆ ಹೆಚ್ಚುತ್ತಿದೆ. ಉದ್ಯಮಿಗಳು, ವಿಜ್ಞಾನಿಗಳು ಹಾಗೂ ಸಂಶೋಧಕರ ನಡುವಿನ ಹೆಚ್ಚಿನ ಸಹಕಾರವು ಇಂಧನ ತಂತ್ರಜ್ಞಾನದಲ್ಲಿನ ನಾವೀನ್ಯತೆಗೆ ವೇಗ ನೀಡುವುದರ ಜತೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಒಂದು ದೇಶದಲ್ಲಿ ನಡೆಯುವ ಬೆಳವಣಿಗೆಗಳು ಜಗತ್ತಿನಾದ್ಯಂತದ ಆರ್ಥಿಕತೆ ಮತ್ತು ಸಮಾಜಗಳ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತವೆ. ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಸದಾ ಸಾಮೂಹಿಕ ಪ್ರಯತ್ನಗಳಿಗೆ ಒತ್ತು ನೀಡಿದೆ. 'ವಸುದೈವ ಕುಟುಂಬಕಂ' ಆಶಯದಂತೆ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣದ ಸಾಮಾನ್ಯ ಗುರಿಗಳನ್ನು ಸಾಧಿಸಲು ಎಲ್ಲ ರಾಷ್ಟ್ರಗಳು ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಆರ್ಥಿಕ ಬೆಳವಣಿಗೆಯು ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಸಮಾನ ಅವಕಾಶಗಳನ್ನು ಖಾತರಿಪಡಿಸುವುದರ ಜತೆಗೆ ಸಮಾಜದ ಕಲ್ಯಾಣಕ್ಕೂ ಕೊಡುಗೆ ನೀಡಬೇಕು. ಹಂಚಿಕೆಯ ಸಮೃದ್ಧಿ ಮತ್ತು ಮಾನವ ಕಲ್ಯಾಣವು ಅಂತರರಾಷ್ಟ್ರೀಯ ಸಹಕಾರದ ಪ್ರಮುಖ ಉದ್ದೇಶಗಳಾಗಿ ಉಳಿಯಬೇಕು ಎಂದು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಪ್ರತಿಪಾದಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande