
ಢಾಕಾ (ಬಾಂಗ್ಲಾದೇಶ), 19 ನವೆಂಬರ್ (ಹಿ.ಸ.):
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಪ್ತ ಹಾಗೂ ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಾಹಿದ್ ಅವರನ್ನು ರಾಜಧಾನಿ ಢಾಕಾದಲ್ಲಿ ಪೊಲೀಸರು ಗುರುವಾರ ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿದೆ. ಹಸೀನಾ ಅವರ ತವರು ಜಿಲ್ಲೆ ಗೋಪಾಲಗಂಜ್ನಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ, ಅವರ ಆಪ್ತ ನಾಯಕ ನಾಹಿದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ, ಅವಾಮಿ ಲೀಗ್ನ ಸಲಹಾ ಮಂಡಳಿ ಸದಸ್ಯರಾಗಿರುವ ನೂರುಲ್ ಇಸ್ಲಾಂ ನಾಹಿದ್ ಅವರನ್ನು ಗುರುವಾರ ಮುಂಜಾನೆ ಸುಮಾರು 2.20ಕ್ಕೆ ರಾಜಧಾನಿಯ ಉತ್ತರಾ ಪ್ರದೇಶದ ಸೆಕ್ಟರ್ 3ರ ರಸ್ತೆ ಸಂಖ್ಯೆ 2ರಲ್ಲಿರುವ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. 81 ವರ್ಷದ ನಾಹಿದ್ ಅವರು ಕುಟುಂಬದೊಂದಿಗೆ ಮನೆಯಲ್ಲಿ ವಾಸವಾಗಿದ್ದರು.
ಉತ್ತರಾ ಪಶ್ಚಿಮ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮೊಹಮ್ಮದ್ ಖಾಲಿದ್ ಮನ್ಸೂರ್ ಅವರು ನಾಹಿದ್ ಬಂಧನವನ್ನು ದೃಢಪಡಿಸಿದ್ದಾರೆ. 2024ರಲ್ಲಿ ನಡೆದ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಸಂದರ್ಭದಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನೂರುಲ್ ಇಸ್ಲಾಂ ನಾಹಿದ್ ಅವರು ಸಿಲ್ಹೆಟ್-6 ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಬೀನಿಬಜಾರ್ ಮತ್ತು ಗೋಲಾಪ್ಗಂಜ್ ಪ್ರದೇಶಗಳು ಸೇರಿವೆ. 2008ರ ಸಾರ್ವತ್ರಿಕ ಚುನಾವಣೆಯ ಬಳಿಕ ಅವಾಮಿ ಲೀಗ್ ಅಧಿಕಾರಕ್ಕೆ ಬಂದಾಗ ಅವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಲಾಗಿತ್ತು. ಸುಮಾರು ಒಂದು ದಶಕ ಕಾಲ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
2015ರಿಂದ 2017ರವರೆಗೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮಹಾಸಭೆಯ 38ನೇ ಅಧಿವೇಶನದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರ ಆಗಸ್ಟ್ನಲ್ಲಿ ಅವಾಮಿ ಲೀಗ್ ಸರ್ಕಾರ ಪತನಗೊಂಡ ಬಳಿಕ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ.
ಅವಾಮಿ ಲೀಗ್ ಪಕ್ಷದ ಮೇಲೆ ಕಳೆದ ಒಂದು ವರ್ಷದಿಂದ ನಿಷೇಧ ಹೇರಲಾಗಿದ್ದು, ಪಕ್ಷದ ನಾಯಕಿ ಶೇಖ್ ಹಸೀನಾ ಅವರ ಅನುಪಸ್ಥಿತಿಯಲ್ಲೇ ಬಾಂಗ್ಲಾದೇಶದ ನ್ಯಾಯಾಲಯವೊಂದು ಅವರಿಗೆ ಮರಣದಂಡನೆ ವಿಧಿಸಿದೆ. ಈ ಬೆಳವಣಿಗೆಗಳ ನಡುವೆಯೇ ಪಕ್ಷದ ಹಿರಿಯ ನಾಯಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವುದು ದೇಶದ ರಾಜಕೀಯ ಪರಿಸ್ಥಿತಿಯಲ್ಲಿನ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.