
ನವದೆಹಲಿ, 18 ನವೆಂಬರ್ (ಹಿ.ಸ.):
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ ಭಾರತ ವಿರೋಧಿ ಪ್ರಚಾರಕ್ಕೆ ಮತ್ತೊಂದು ವೇದಿಕೆ ಸಿಗುತ್ತದೆ.
ದೇಶದ ಮತದಾರರ ವಿಶ್ವಾಸ ಗಳಿಸಲು ಸಾಧ್ಯವಾಗದ ಅವರು ವಿದೇಶಿ ನೆಲದಲ್ಲಿ ಭಾರತದ ಘನತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವುದನ್ನೇ ರಾಜಕೀಯ ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಭಾರತವನ್ನು ಆರ್ಥಿಕ ದುರಂತ ಎಂದು ಬಣ್ಣಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಕುರಿತು ಜಗತ್ತಿಗೆ ಪಾಠ ಹೇಳುವ ರಾಹುಲ್ ಗಾಂಧಿ, ದೇಶದ ಆರ್ಥಿಕತೆಯನ್ನು ಟೀಕಿಸುವ ಮೂಲಕ ಭಾರತದ ವಿರುದ್ಧ ನಕಾರಾತ್ಮಕ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಜಾಗತಿಕ ಆರ್ಥಿಕ ಸಂಸ್ಥೆಗಳ ಅಂದಾಜುಗಳನ್ನು ಉಲ್ಲೇಖಿಸಿರುವ ಜೋಶಿ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಮೂಡೀಸ್ ಮತ್ತು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ.7ರ ಆಸುಪಾಸಿಗೆ ಹೆಚ್ಚಿಸಿವೆ ಎಂದು ಹೇಳಿದ್ದಾರೆ.
ಗೋಲ್ಡ್ಮನ್ ಸ್ಯಾಕ್ಸ್ ಸಂಸ್ಥೆಯು 2027ರಲ್ಲಿ ಭಾರತದ ಆರ್ಥಿಕತೆ ಶೇ.7.2ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಿದೆ. ಅಕ್ಟೋಬರ್ 2026ರ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ.4.9ಕ್ಕೆ ಇಳಿದಿದೆ. ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಶೇ.31.5ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತು ತ್ರಿವರ್ಣ ಧ್ವಜದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದರೆ, ರಾಹುಲ್ ಗಾಂಧಿ ವಿದೇಶಗಳಲ್ಲಿ ಭಾರತ ವಿರೋಧಿ ಪ್ರಚಾರದ ಪ್ರಮುಖ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಭಾರತ ಆತ್ಮವಿಶ್ವಾಸದಿಂದ ಪ್ರಗತಿಯತ್ತ ಸಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರಸ್ತುತತೆ ಕುಸಿಯುತ್ತಿದೆ ಎಂದು ಪ್ರಹ್ಲಾದ ಜೋಶಿ ತಮ್ಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R