
ಗದಗ, 17 ನವೆಂಬರ್ (ಹಿ.ಸ.)
ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ಕಲಿಕೆ ಮಾಡಬೇಕು. ಮಕ್ಕಳಿಗೆ ಮಾತೃಭಾಷೆಗೆ ಹೆಚ್ಚು ಒತ್ತುಕೊಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ನೀಡಬೇಕು. ಒಂದೊಮ್ಮೆ ಮಕ್ಕಳ ಕಲಿಕಾ ಅವಧಿಯಲ್ಲಿ ಕಲಿಸುವ ಶಿಕ್ಷಣದ ಗುಣಮಟ್ಟ ಕಳಪೆ ಮಟ್ಟದ್ದಾದರೆ ಮಕ್ಕಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಕಾಲೇಜುಗಳಲ್ಲಿನ ಉಪನ್ಯಾಸಕರಿಗೂ ಕಲಿಕಾ ತರಬೇತಿ ಅತ್ಯವಶ್ಯವಾಗಿದೆ. ಉಪನ್ಯಾಸಕರು ಸಂವಹನ ಕಲೆ ಹಾಗೂ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಕಲಿಸುವ ನೈಪುಣ್ಯತೆ ರೂಢಿಸಿಕೊಳ್ಳಬೇಕು ಎಂದ ಸಚಿವರು ಜಿಲ್ಲೆಯಲ್ಲಿರುವ ದ್ವಿಭಾಷಾ ಶಾಲೆಗಳ ಮಾಹಿತಿ, ಸರ್ಕಾರಿ , ಅನುದಾನಿತ , ಅನುದಾನರಹಿತ ಶಾಲೆಗಳ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಪಡೆದುಕೊಂಡರು. ಸಭೆಗೆ ಬರುವಾಗ ಇಲಾಖೆಯ ಕುರಿತು ಸಂಪೂರ್ಣವಾದ ಪೂರಕ ಮಾಹಿತಿಯನ್ನು ಒದಗಿಸಬೇಕು. ತಮ್ಮ ತಮ್ಮ ಇಲಾಖೆಯಲ್ಲಿ ಕುಂದುಕೊರತೆಗಳು, ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಟ್ಟಿಯನ್ನು ತಯಾರಿಸಿಕೊಂಡು ಬರಬೇಕು ಎಂದರು.
ಅಕ್ಷರ ದಾಸೋಹ ಅಧಿಕಾರಿಗಳು ಮಾತನಾಡಿ ಅಕ್ಷರ ದಾಸೋಹ ಯೋಜನೆಯಡಿ 2026-27 ನೇ ಸಾಲಿಗೆ ಒಟ್ಟು 1,18,478 ಫಲಾನುಭವಿಗಳು ಬಿಸಿಊಟ ಸೇವಿಸುತ್ತಿದ್ದು ಶೇ 100 ಪ್ರಗತಿ ಸಾಧಿಸಲಾಗಿದೆ. ಬಿಸಿಯೂಟದ ಜೊತೆಗೆ ಮಕ್ಕಳ ಆರೋಗ್ಯ ವೃದ್ಧಿಗಾಗಿ ಕ್ಷೀರ ಭಾಗ್ಯಯೋಜನೆಯಡಿ ಹಾಲು ಹಾಗೂ ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು , ರಾಗಿ ಮಾಲ್ಟ್ ವಿತರಿಸಲಾಗುತ್ತದೆ. ಗದಗ ಪ್ರದೇಶದ ಮಕ್ಕಳು ರಾಗಿ ಮಾಲ್ಟ್ ನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಆದಕಾರಣ ಅದಕ್ಕೆ ರ್ಯಾಯವಾಗಿ ಮಕ್ಕಳಿಗೆ ಹಾಲಿನ ಜೊತೆಗೆ ಬದಾಮಿ ಪೌಡರ್ನ್ನು ವಿತರಿಸಬಹುದಾದ ವಿಚಾರವನ್ನು ಸಚಿವರ ಗಮನಕ್ಕೆ ತಂದಾಗ ಸಚಿವರು ಈ ವಿಚಾರದ ಕುರಿತು ಪ್ರಶಂಶಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ 30 ಕಾಲೇಜುಗಳಿವೆ. 6833 ವಿದ್ಯಾರ್ಥಿಗಳಿದ್ದಾರೆ. 237 ಹುದ್ದೆಗಳು ಮಂಜೂರಾಗಿದ್ದು 137 ಹುದ್ದೆಗಳು ಖಾಲಿ ಇವೆ. ಗೋಗೇರಿಯಲ್ಲಿನ ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ ಎಂದು ಸಭೆಯ ಗಮನಕ್ಕೆ ತಂದರು.
ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಅವರು ಮಾತನಾಡಿ ಜಿಲ್ಲೆಯಲ್ಲಿ ವಿಬಿ- ಜಿ ರಾಮಜಿ ಯೋಜನೆಯಡಿಯಲ್ಲಿ ಉದ್ಯೋಗ ಚೀಟಿಗಳ ಸಂಖ್ಯೆ 165053 ಇದ್ದು , ಕ್ರಿಯಾಶೀಲ ಉದ್ಯೋಗ ಚೀಟಿಗಳ ಸಂಖ್ಯೆ 113326 ಇರುತ್ತದೆ. 364117 ನೊಂದಾಯಿತ ಕೂಲಿಕಾರರಿದ್ದು 233844 ಕ್ರಿಯಾಶೀಲ ನೊಂದಾಯಿತ ಕೂಲಿಕಾರರಿದ್ದಾರೆ. ಪ್ರಸ್ತುತ ಸಾಲಿನಲ್ಲಿ ವಿಬಿ-ಜಿ ರಾಮಜಿ ಯೋಜನೆಯಡಿ 21774 ವೈಯಕ್ತಿಕ ಕಾಮಗಾರಿಗಳು ಹಾಗೂ 10727 ಸಮುದಾಯ ಕಾಮಗಾರಿಗಳು ಸೇರಿದಂತೆ ಒಟ್ಟಾರೆ 32501 ಕಾಮಗಾರಿಗಳು ಅನುಮೋದನೆಗೊಂಡಿರುತ್ತವೆ. ಜುಲೈ 1 ರಿಂದ ನವೆಂಬರ್ 16 ರವರೆಗೆ 296184 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ ಅವರು ಮಾತನಾಡಿ ಜಿ.ಪಂ. ಗೆ ಜಿಲ್ಲಾ ವಲಯದಡಿ ವೇತನ , ವೇತನೇತರ , ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನದ ಕುರಿತು ಮಾಹಿತಿ ಒದಗಿಸಿದರು. 16 ನೇ ಹಣಕಾಸು ಆಯೋಗದಡಿ ಜಿ.ಪಂ., ತಾ.ಪಂ. ಗ್ರಾ.ಪಂ. ಗಳಿಗೆ ಪ್ರತ್ಯೇಕ ಅನುದಾನ ಬರುತ್ತಿರುವ ಕುರಿತು ಮಾಹಿತಿ ಒದಗಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್ ಅವರು ಕಂದಾಯ ಇಲಾಖೆಗೆ ಸಂಬAಧಿಸಿದAತೆ ಸಾಮಾಜಿಕ ಭದ್ರತಾ ಯೋಜನೆಗಳು, ಮಾಸಿಕ ಪಿಂಚಣಿ ವಿತರಣೆ , ವೇತನದ ವಿವರ ಹಾಗೂ ಮಂಜೂರಾದ ಹಾಗೂ ಖಾಲಿ ಇರುವ ಹುದ್ದೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ವಿಶೇಷ ಅಭಿಯಾನ: ಭೂ ದಾಖಲೆಗಳ ಇಲಾಖೆಗೆ ಸಂಬAಧಿಸಿದAತೆ ತಾಲೂಕಾವಾರು ಸರ್ವೆ ಪ್ರಕರಣಗಳು ಬಾಕಿ ಇದ್ದು ಅವುಗಳ ಇತ್ಯರ್ಥಕ್ಕಾಗಿ ವಿಶೇಷ ಅಭಿಯಾನ ಹಂತವಾಗಿ ಮೊದಲಿಗೆ ಗಜೇಂದ್ರಗಡ ತಾಲೂಕಿನ 578 ಬಾಕಿ ಪ್ರಕರಣಗಳನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಸಚಿವರು ಸೂಚಿಸಿದರು. ವಿಶೇಷ ಅಭಿಯಾನಕ್ಕೆ ಇದೇ ತಿಂಗಳು ಕೊನೆಯಲ್ಲಿ ಚಾಲನೆ ನೀಡಲಾಗುವುದು. ಡಿಸೆಂಬರ ಅಂತ್ಯದೊಳಗಾಗಿ ಗಜೇಂದ್ರಗಡ ತಾಲೂಕಿನ ಭೂ ದಾಖಲೆಗಳ ಸರ್ವೆ ಬಾಕಿ ಪ್ರಕರಣಗಳು ಮುಕ್ತಾಯಗೊಳಿಸಲು ಸಚಿವರು ಸೂಚಿಸಿದರು.
ನ.27 ರಂದು ತ್ರೈಮಾಸಿಕ ಕೆಡಿಪಿ : ಇದೇ ನವೆಂಬರ್ 27 ರಂದು ಮಧ್ಯಾಹ್ನ 3 ಗಂಟೆಯಿಂದ ಗದಗ ಜಿಲ್ಲೆಯ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಗುವುದು. ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಪ್ರಗತಿ ವಿವರ ಸಲ್ಲಿಸಬೇಕೆಂದು ಸಚಿವ ಬಸವರಾಜ ರಾಯರಡ್ಡಿ ಸೂಚಿಸಿದರು.
ಪಿಡಿಓಗಳಿಗೆ ಕಾರ್ಯಾಗಾರ : ನೂತನವಾಗಿ ಅನುಷ್ಟಾನಗೊಳಿಸಲಾಗುತ್ತಿರುವ ವಿಬಿ -ಜಿ ರಾಮಜಿ ಖಾತ್ರಿ ಯೋಜನೆಯ ಕುರಿತು ಸಮಗ್ರವಾಗಿ ಅನುಷ್ಟಾನ ಅಧಿಕಾರಿಗಳಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಲು ಎರಡು ದಿನಗಳ ಕಾರ್ಯಾಗಾರ ಏರ್ಪಡಿಸುವ ಮೂಲಕ ಯೋಜನೆಯ ಪರಿಣಾಮಕಾರಿ ಅನುಷ್ಟಾನ ಹಾಗೂ ಆರ್ಥಿಕ ಭೌತಿಕ ಗುರಿ ಸಾಧನೆಗೆ ತರಬೇತಿ ಏರ್ಪಡಿಸುವಂತೆ ಜಿ.ಪಂ. ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ , ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಮಿಥುನ್ ಎಚ್.ಎನ್. ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿ.ಪಂ.ದ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ .ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP