ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಸಿ.ಐ.ಟಿ.ಯು. ಪ್ರತಿಭಟನೆ
ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಸಿ.ಐ.ಟಿ.ಯು. ಪ್ರತಿಭಟನೆ
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಸಿ.ಐ.ಟಿ.ಯು. ಕಾರ್ಮಿಕ ಸಂಘಟನೆಯ ಆಶ್ರಯದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.


ಕೋಲಾರ, 17 ನವೆಂಬರ್ (ಹಿ.ಸ.)

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ನಾಲ್ಕುಲೇಬರ್ ಕೋಡ್ ಗಳ ಅಡಿಯಲ್ಲಿ ರದ್ದಾಗಿರುವ ೧೯೯೬ ರ ಕಟ್ಟಡ ಕಾರ್ಮಿಕ ಕಾನೂನು ಮತ್ತು ಸೆಸ್ ಕಾನೂನುಗಳು ಪುನರ್ ಸ್ಥಾಪನೆಗೊಳ್ಳಬೇಕು. ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಅವುಗಳಲ್ಲಿ ಶೇಖರಣೆಗೊಂಡಿರುವ ಸಾವಿರಾರು ಕೋಟಿ ನಿಧಿಯನ್ನು ಸಂರಕ್ಷಿಸಬೇಕೆAದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಪಿ ಶ್ರೀನಿವಾಸ್ ಮಾತನಾಡಿ ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನ ಪಾವತಿ ಮಾಡಬೇಕು ಮತ್ತು ಈಗಿರುವ ಬೆಲೆ ಏರಿಕೆಗೆ ತಕ್ಕಂತೆ ಸಹಾಯಧನ ಮೊತ್ತ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು ರೂ.೫೦೦೦ಗೆ ಹೆಚ್ಚಿಸಿ 'ವೈದ್ಯಕೀಯ ತಪಾಸಣೆ' ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಯಾಗಲಿ ದುಬಾರಿವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆ ನಿರ್ಮಾಣ ಯೋಜನೆ ಕೈಬಿಡಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಮಾಡಿರುವ ಗುತ್ತಿಗೆ ಆಧಾರಿತ ಖಾಸಗಿ ಏಜೆನ್ಸಿ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದು ಮಾಡಿಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್ ಮಾತನಾಡಿ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹಕ್ಕುಗಳಿಂದ ವಂಚಿಸುವ ವ್ಯವಸ್ಥಿತ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿದೆ, ೫೦ ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದ ನಿರ್ಮಾಣದಲ್ಲಿ ಕೆಲಸ ಮಾಡುವವರನ್ನು ನಿರ್ಮಾಣ ಕಾರ್ಮಿಕರು ಎಂದು ಪರಿಗಣಿಸದಿರಲು ಮುಂದಾಗಿರುವುದು ಕಟ್ಟಡ ಕಾರ್ಮಿಕರಿಗೆ ಮಾಡುವ ದ್ರೋಹ ಆಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಕಾರ್ಮಿಕ ಕಾಯ್ದೆಗೆ ಬದಲಿಯಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಭಾರತದ ಕಾರ್ಮಿಕ ವರ್ಗದ ಕೊರಳಿಗೆ ಬಿಗಿದಿರುವ ಉರುಳಾಗಿದೆ. ಮೋದಿ ಸರಕಾರ ಕಾರ್ಪೊರೇಟ್ ಬಂಡವಾಳದಾರರ ಉದ್ದಾರಕ್ಕೆ ಟೊಂಕ ಕಟ್ಟಿದೆ. ಅದಕ್ಕಾಗಿ ಕಾರ್ಮಿಕ ವರ್ಗದ ಹಕ್ಕುಗಳನ್ನು ನಿರ್ದಯವಾಗಿ ಕಿತ್ತುಹಾಕುತ್ತಿದೆ. ಕಾರ್ಮಿಕರು ಈ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಬೀದಿಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ವಿಜಯಕೃಷ್ಣ, ಕೆ.ಮಂಜುನಾಥ್, ಆಶಾ, ರಾಮಚಂದ್ರಪ್ಪ, ಹೊಗರಿ ನಾಗರಾಜಪ್ಪ, ಅಂಜನಪ್ಪ, ವಿಜಯಕುಮಾರ್, ಬಿ.ಎಲ್.ಕೇಶವರಾವ್, ರಾಮಕೃಷ್ಣಪ್ಪ, ನಾಗರಾಜ್, ಅಶೋಕರಾವ್ ಮತ್ತಿತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande