
ಹುಬ್ಬಳ್ಳಿ, 17 ನವೆಂಬರ್ (ಹಿ.ಸ.):
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ 82 ವಾರ್ಡ್ಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವಂತೆ ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳಲು ಕರ್ನಾಟಕ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ ತಿಳಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ವಾರ್ಡ್ ಸಮಿತಿಗಳ ರಚನೆಗಾಗಿ ನಡೆಸಿಕೊಂಡು ಬಂದ ಕಾನೂನು ಹೋರಾಟಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಈ ಸಂಬಂಧ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಬೆಂಗಳೂರು ಪ್ರಧಾನ ಪೀಠವು ನವೆಂಬರ್ 17ರಂದು ಇತ್ಯರ್ಥಗೊಳಿಸಿದೆ.
ಡಬ್ಲ್ಯುಪಿ 36441/2025 (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಂಖ್ಯೆಯ ಈ ಪ್ರಕರಣವನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿ ಇತ್ಯರ್ಥಪಡಿಸಿದೆ.
ಟ್ರಸ್ಟ್ನ ವಕೀಲರು ಮೌಖಿಕವಾಗಿ ನೀಡಿರುವ ಮಾಹಿತಿಯ ಪ್ರಕಾರ, ಮೂರು ತಿಂಗಳೊಳಗೆ ವಾರ್ಡ್ ಸಮಿತಿಗಳನ್ನು ರಚಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ನ್ಯಾಯಾಲಯದ ವಿವರವಾದ ಲಿಖಿತ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ನ ಅಧ್ಯಕ್ಷ ಲಿಂಗರಾಜ್ ಚನ್ನಬಸಪ್ಪ ಧಾರವಾಡ ಶೆಟ್ಟರ್, ಈ ಕಾನೂನು ಹೋರಾಟಕ್ಕೆ ಪ್ರೇರಣೆಯಾದ ಸಂತೋಷ್ ನರಗುಂದ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೋರಾಟಕ್ಕೆ ಮಾರ್ಗದರ್ಶನ ನೀಡಿದ ಹಿರಿಯರು, ಬೆಂಬಲ ನೀಡಿದ ಸಂಘ-ಸಂಸ್ಥೆಗಳು, ಪತ್ರಿಕಾ ಮಿತ್ರರು, ಟ್ರಸ್ಟ್ನ ಸದಸ್ಯರು ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಆರ್ಥಿಕ ನೆರವು ನೀಡಿದ ನಾಗರಿಕರಿಗೂ ಧನ್ಯವಾದ ತಿಳಿಸಿದ್ದಾರೆ.
ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವೈಯಕ್ತಿಕ ಗೆಲುವಲ್ಲ. ಪ್ರಜಾಪ್ರಭುತ್ವ, ನಾಗರಿಕರ ಹಕ್ಕು ಹಾಗೂ ಸ್ಥಳೀಯ ಸ್ವರಾಜ್ಯದ ಆಶಯಕ್ಕೆ ಸಂದ ಗೌರವವಾಗಿದೆ. ವಾರ್ಡ್ ಸಮಿತಿಗಳ ಮೂಲಕ ಆಡಳಿತದಲ್ಲಿ ನಾಗರಿಕರ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಸಾಕಾರಗೊಳ್ಳಬೇಕು ಎಂಬುದು ಟ್ರಸ್ಟ್ನ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.