
ಗದಗ, 17 ನವೆಂಬರ್ (ಹಿ.ಸ.)
ಗದಗ ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಸಾಧನೆಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ, ಬದ್ಧತೆ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗುವುದರೊಂದಿಗೆ ಸಾರ್ವಜನಿಕರಿಗೆ ಯೋಜನೆಗಳ ಪೂರ್ಣ ಪ್ರಯೋಜನ ತಲುಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ನೀರಾವರಿ, ಲೋಕೋಪಯೋಗಿ, ಅರಣ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳು, ಮಂಜೂರಾದ ಹಾಗೂ ಖಾಲಿ ಹುದ್ದೆಗಳು, ಅನುದಾನ ಬಳಕೆ, ಕಾಮಗಾರಿಗಳ ಪ್ರಗತಿ ಮತ್ತು ಯೋಜನೆಗಳ ಅನುಷ್ಠಾನದ ಕುರಿತು ಸಚಿವರು ಸಮಗ್ರ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.38ರಷ್ಟು ಕಡಿಮೆ ಮಳೆಯಾಗಿದ್ದು, ಬರದಿಂದ ಉಂಟಾದ ಹಾನಿಯ ಅಂದಾಜು ₹262 ಕೋಟಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ ದೊರಕಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೇಷ್ಮೆ ಹಾಗೂ ಪಶುಸಂಗೋಪನೆ ಇಲಾಖೆಗಳ ಪ್ರಗತಿ ಮತ್ತು ಸಿಬ್ಬಂದಿ ಕುರಿತಂತೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆ ನೋಟಿಸ್ ನೀಡುವಂತೆ ಸೂಚಿಸಿದರು. ಹಮ್ಮಿಗಿ ಜಲಾಶಯದಲ್ಲಿ ಮೀನುಗಾರಿಕೆ ಫಾರ್ಮ್ ಸ್ಥಾಪಿಸಿ ಸ್ಥಳೀಯ ಮೀನುಗಾರರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಮಳೆನೀರು ಸಂಗ್ರಹ ಹಾಗೂ ಅಂತರ್ಜಲ ವೃದ್ಧಿಗಾಗಿ ಚೆಕ್ಡ್ಯಾಂ ನಿರ್ಮಾಣಕ್ಕೆ ಭವಿಷ್ಯದ ಯೋಜನೆ ರೂಪಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಪ್ರಗತಿ, ವೆಚ್ಚ ಹಾಗೂ ಅನುದಾನದ ಕುರಿತು ಸ್ಪಷ್ಟ ಮಾಹಿತಿ ನೀಡದ ಅಧಿಕಾರಿಗಳನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆಗೆ ಸಂಬಂಧಪಟ್ಟ ಎಇಇ ಹಾಜರಾಗದೆ ಜೆಇಗಳನ್ನು ಕಳುಹಿಸಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅರಣ್ಯ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ನೆಟ್ಟಿರುವ ಮರಗಳ ಸಂಖ್ಯೆ ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ತಿಳಿಸಿದರು.
ಶಿಕ್ಷಣ ಕ್ಷೇತ್ರದ ಪ್ರಗತಿ ಪರಿಶೀಲನೆ ವೇಳೆ ಶಾಲೆಗಳಲ್ಲಿ ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡಿ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರಿಗೆ ಅಗತ್ಯ ತರಬೇತಿ ನೀಡಬೇಕು. ವಿದ್ಯಾರ್ಥಿಗಳಿಗೆ ಪಾಠಗಳು ಸುಲಭವಾಗಿ ಅರ್ಥವಾಗುವಂತೆ ಬೋಧನಾ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯಲ್ಲಿ 1,18,478 ಮಕ್ಕಳು ಬಿಸಿಯೂಟ ಪಡೆಯುತ್ತಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಿರುವ ಕುರಿತು ಮಾಹಿತಿ ಪಡೆಯಲಾಯಿತು. ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಹಾಲಿನೊಂದಿಗೆ ಬಾದಾಮಿ ಪುಡಿ ವಿತರಿಸುವ ಪ್ರಸ್ತಾವನೆಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ವಿಬಿ-ಜಿ ರಾಮಜಿ ಯೋಜನೆಯಡಿ ಅನುಮೋದನೆಯಾಗಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಯೋಜನೆಯ ಅನುಷ್ಠಾನಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎರಡು ದಿನಗಳ ವಿಶೇಷ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಬೇಕು ಎಂದು ಸೂಚಿಸಿದರು.
ಭೂ ದಾಖಲೆಗಳ ಇಲಾಖೆಯಲ್ಲಿ ಬಾಕಿ ಇರುವ ಸರ್ವೆ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ಮೊದಲ ಹಂತದಲ್ಲಿ ಗಜೇಂದ್ರಗಡ ತಾಲೂಕಿನ 578 ಬಾಕಿ ಪ್ರಕರಣಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ತಾಲೂಕಿನಲ್ಲಿ ಬಾಕಿ ಪ್ರಕರಣಗಳ ವಿಲೇವಾರಿ ಮಾಡಬೇಕು ಎಂದರು.
ಇಲಾಖೆಗಳ ಅಧಿಕಾರಿಗಳು ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ನವೆಂಬರ್ 27ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ತ್ರೈಮಾಸಿಕ ಕೆಡಿಪಿ ಸಭೆಗೆ ಪ್ರಗತಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.
ಸಭೆಗಳಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಹೆಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವರ ಪ್ರಮುಖ ನಿರ್ದೇಶನಗಳು
ಕೃಷಿ ಇಲಾಖೆ: ₹23.29 ಕೋಟಿ ಅನುದಾನ ಸಮರ್ಪಕ ಬಳಕೆ, ಬಿತ್ತನೆ ಬೀಜ–ರಸಗೊಬ್ಬರ ಲಭ್ಯತೆ ವರದಿ ಸಂಗ್ರಹ ಹಾಗೂ ರೈತರಿಗೆ ಬರ ಪರಿಹಾರವಾಗಿ ಪ್ರತಿ ಹೆಕ್ಟರ್ ಗೆ ೫ ಸಾವಿರ ನೀಡಲು ಸಿ ಎಂ ಘೋಷಣೆ ಹಾಗೂ ರೈತರಿಗೆ ಬರ ಪರಿಹಾರ ವಿತರಣೆ.
ತೋಟಗಾರಿಕೆ ಇಲಾಖೆ: ಯೋಜನೆಗಳ ಅನುಷ್ಠಾನ ಮತ್ತು ಡಂಬಳ ತೋಟಗಾರಿಕೆ ಕಾಲೇಜಿನ ಪ್ರಗತಿ ವರದಿ ಸಲ್ಲಿಕೆಗೆ ಸೂಚನೆ.
ರೇಷ್ಮೆ ಮತ್ತು ಪಶುಸಂಗೋಪನೆ: ಇಲಾಖೆಗಳ ಪ್ರಗತಿ ಮಾಹಿತಿ ಹೊಂದಿರಬೇಕು. ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳಿಗೆ ನೋಟಿಸ್. ಪಾಲಿಕ್ಲಿನಿಕ್ ಆಸ್ಪತ್ರೆ ಪರಿಶೀಲನೆ ಹಾಗೂ ಪಶುವೈದ್ಯಕೀಯ ಸೇವೆ ಸುಧಾರಣೆಯಾಗಲಿ.
ಮೀನುಗಾರಿಕೆ ಇಲಾಖೆ: ಹಮ್ಮಿಗಿ ಜಲಾಶಯದಲ್ಲಿ ಮುನಿರಾಬಾದ್ ಮಾದರಿಯಲ್ಲಿ ಮೀನುಗಾರಿಕೆ ಫಾರ್ಮ್ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಕ್ರಮವಹಿಸಿ.
ನೀರಾವರಿ ಇಲಾಖೆ: ಚೆಕ್ಡ್ಯಾಂ ನಿರ್ಮಾಣಕ್ಕೆ ದೀರ್ಘಕಾಲೀನ ಯೋಜನೆ ಹಾಗೂ ಸಿಂಗಟಾಲೂರು ಯೋಜನೆಯ ಹನಿ ನೀರಾವರಿ ಪ್ರದೇಶಗಳ ನಕ್ಷೆ ಸಿದ್ಧಪಡಿಸಬೇಕು.
ಲೋಕೋಪಯೋಗಿ ಇಲಾಖೆ: ಕಾಮಗಾರಿಗಳ ಅನುದಾನ, ವೆಚ್ಚ ಮತ್ತು ಪ್ರಗತಿಯ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ಸೂಚನೆ.ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ.
ಅರಣ್ಯ ಇಲಾಖೆ: ಕಳೆದ ಮೂರು ವರ್ಷಗಳ ಸಸಿ ನೆಡುವಿಕೆ ಹಾಗೂ ಅವುಗಳ ಸ್ಥಿತಿಗತಿ ವರದಿ ಸಲ್ಲಿಸಬೇಕು. ಸಚಿವರಿಂದ ಖುದ್ದು ಪರಿಶೀಲನೆ.
ಶಿಕ್ಷಣ ಇಲಾಖೆ: ಕನ್ನಡ ಮಾಧ್ಯಮ ಕಲಿಕೆಗೆ ಆದ್ಯತೆ, ಗುಣಮಟ್ಟದ ಶಿಕ್ಷಣ ಹಾಗೂ ಉಪನ್ಯಾಸಕರಿಗೆ ಬೋಧನಾ ತರಬೇತಿ ನೀಡಬೇಕು.
ಗ್ರಾಮೀಣಾಭಿವೃದ್ಧಿ ಇಲಾಖೆ: ವಿಬಿ-ಜಿ ರಾಮಜಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಹಾಗೂ ಪಿಡಿಒಗಳಿಗೆ ಎರಡು ದಿನಗಳ ತರಬೇತಿ ಆಯೋಜಿಸಲು ನಿರ್ದೇಶನ.
ಭೂ ದಾಖಲೆ ಇಲಾಖೆ: ಗಜೇಂದ್ರಗಡ ತಾಲೂಕಿನ 578 ಬಾಕಿ ಸರ್ವೆ ಪ್ರಕರಣಗಳನ್ನು ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥಪಡಿಸಬೇಕು. ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು.
ಎಲ್ಲ ಇಲಾಖೆಗಳು: ಕಾಮಗಾರಿಗಳ ಅನುದಾನ, ವೆಚ್ಚ ಮತ್ತು ಬಾಕಿ ಮೊತ್ತದ ವಿವರ ಸಲ್ಲಿಸಬೇಕು. ಅಧಿಕಾರಿಗಳು ಸಂಪೂರ್ಣ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು.
ಕೆಡಿಪಿ ಸಭೆ: ನವೆಂಬರ್ 27ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ತ್ರೈಮಾಸಿಕ ಸಭೆಗೆ ಎಲ್ಲ ಇಲಾಖೆಗಳು ಸಮಗ್ರ ಪ್ರಗತಿ ವರದಿ ಸಲ್ಲಿಸಬೇಕು.
---------------
ಹಿಂದೂಸ್ತಾನ್ ಸಮಾಚಾರ್ / lalita MP