
ಹುಬ್ಬಳ್ಳಿ, 17 ನವೆಂಬರ್ (ಹಿ.ಸ.):
ಶಬರಿಮಲೆ ಅಯ್ಯಪ್ಪ ದೇಗುಲದ ಮಾದರಿಯಲ್ಲಿ ನಿರ್ಮಿಸಲಾಗಿರುವ ಹುಬ್ಬಳ್ಳಿಯ ಶಿರೂರ ಪಾರ್ಕ್ನ ಅಯ್ಯಪ್ಪ ದೇವಸ್ಥಾನದಲ್ಲಿ ಮಕರವಿಳಕ್ಕು (ಮಕರಜ್ಯೋತಿ) ಅಂಗವಾಗಿ ಗಣಹೋಮ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳು ಇಂದು ಭಕ್ತಿಭಾವದಿಂದ ಜರುಗಿದವು.
ಆನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಭಕ್ತರು ಅಯ್ಯಪ್ಪ ಮಾಲಾಧಾರಣೆ ಮಾಡಿದರು. ದೇವಸ್ಥಾನದ ಉಪಾಧ್ಯಕ್ಷ ಡಾ. ಚಿಗರುಪಾಟಿ ವಿ.ಎಸ್.ವಿ. ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸಿದರು.
ಕಳೆದ 13 ವರ್ಷಗಳಿಂದ ಈ ದೇವಸ್ಥಾನಕ್ಕೆ ಉತ್ತರ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಸಾವಿರಾರು ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದಾರೆ. ಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ದೇವಸ್ಥಾನದ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿ ವೃದ್ಧರು ಹಾಗೂ ವಿಕಲಚೇತನ ಭಕ್ತರ ಅನುಕೂಲಕ್ಕಾಗಿ ಉದ್ಯಮಿಗಳಾದ ಡಾ. ವಿಜಯ ಸಂಕೇಶ್ವರ ಮತ್ತು ಆನಂದ ಸಂಕೇಶ್ವರ ಅವರು ದೇವಸ್ಥಾನದಲ್ಲಿ ಮೇಲೇರಲು ಹಾಗೂ ಕೆಳಗಿಳಿಯಲು ಅನುಕೂಲವಾಗುವಂತೆ ಲಿಫ್ಟ್ ಸೌಲಭ್ಯ ಕಲ್ಪಿಸಿದ್ದಾರೆ.
ಕಳೆದ ವರ್ಷಗಳಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಡಾ. ಪ್ರಸಾದ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಜಯರಾಂ ಶೆಟ್ಟಿ, ವಿನಯ ಹುಲ್ಲೂರ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.