ರಾಮನಗರದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ ಒಡಿಶಾ ಮೂಲದ ಯೂಟ್ಯೂಬರ್: ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ
ರಾಮನಗರದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಚಾರಣಕ್ಕೆ ಬಂದು ದಾರಿ ತಪ್ಪಿ ಸಿಲುಕಿದ್ದ ಒಡಿಶಾ ಮೂಲದ ಯೂಟ್ಯೂಬರ್ ಬಿಸ್ವಾಜಿತ್ ನಾಥ್ ಅವರನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ramanagara-youtuber-rescue


ಬೆಂಗಳೂರು, 15 ನವೆಂಬರ್ (ಹಿ.ಸ.):

ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಒಡಿಶಾ ಮೂಲದ ಯೂಟ್ಯೂಬರ್ ಒಬ್ಬರು ದಾರಿ ತಪ್ಪಿ ಬೆಟ್ಟದ ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ರಕ್ಷಿಸಲ್ಪಟ್ಟ ಯುವಕನನ್ನು ಒಡಿಶಾ ಮೂಲದ ಯೂಟ್ಯೂಬರ್ ಬಿಸ್ವಾಜಿತ್ ನಾಥ್ ಎಂದು ಗುರುತಿಸಲಾಗಿದೆ. ಭಾನುವಾರ ತಮ್ಮ ಬೈಕ್‌ನಲ್ಲಿ ಒಬ್ಬಂಟಿಯಾಗಿ ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದ ಅವರು, ಯೂಟ್ಯೂಬ್‌ಗಾಗಿ ವಿಡಿಯೋ ಚಿತ್ರೀಕರಣ ಹಾಗೂ ಚಾರಣದ ಉದ್ದೇಶದಿಂದ ಬೆಟ್ಟ ಏರಿದ್ದರು.

ಬೆಟ್ಟದ ದುರ್ಗಮ ಹಾದಿಗಳಲ್ಲಿ ಸಾಗಿದ ಬಿಸ್ವಾಜಿತ್ ನಾಥ್, ಯಶಸ್ವಿಯಾಗಿ ತುತ್ತತುದಿ ತಲುಪಿದ್ದರು. ಆದರೆ, ವಾಪಸ್ ಕೆಳಗಿಳಿಯುವ ಸಂದರ್ಭದಲ್ಲಿ ಸರಿಯಾದ ದಾರಿ ತಿಳಿಯದೆ ದಾರಿ ತಪ್ಪಿದ್ದಾರೆ. ಮುಳ್ಳು ಕಂಟಿಗಳು ಹಾಗೂ ಕಡಿದಾದ ಬಂಡೆಗಳ ನಡುವೆ ಸಿಲುಕಿಕೊಂಡ ಅವರಿಗೆ ಕೆಳಗಿಳಿಯುವ ಮಾರ್ಗ ಕಾಣದೆ ಆತಂಕ ಎದುರಾಗಿದೆ.

ತಕ್ಷಣ ಮೊಬೈಲ್ ಮೂಲಕ ತುರ್ತು ಸ್ಪಂದನಾ ಸಂಖ್ಯೆ 112ಕ್ಕೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಮಾಹಿತಿ ಪಡೆದ ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ, ಮೊಬೈಲ್ ಮೂಲಕ ಯುವಕನನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ಅವರು ಇರುವ ಸ್ಥಳದ ಮಾಹಿತಿ ಪಡೆದು, ದೂರವಾಣಿ ಮೂಲಕವೇ ಸುರಕ್ಷಿತವಾಗಿ ಕೆಳಗಿಳಿಯಲು ಮಾರ್ಗದರ್ಶನ ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಕಡಿದಾದ ಬಂಡೆಗಳ ಪ್ರದೇಶವಾಗಿದ್ದರಿಂದ ಯುವಕನಿಗೆ ಸ್ವತಃ ಕೆಳಗಿಳಿಯಲು ಸಾಧ್ಯವಾಗಿಲ್ಲ.

ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ದುರ್ಗಮ ಪ್ರದೇಶಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ದಟ್ಟ ಕಾಡು ಹಾಗೂ ಬಂಡೆಗಳ ನಡುವೆ ಸಿಲುಕಿದ್ದ ಬಿಸ್ವಾಜಿತ್ ನಾಥ್ ಅವರನ್ನು ಪತ್ತೆಹಚ್ಚಿದ ಸಿಬ್ಬಂದಿ, ಹಗ್ಗದ ನೆರವಿನಿಂದ ಅತ್ಯಂತ ಜಾಗರೂಕತೆಯಿಂದ ರಕ್ಷಿಸಿದ್ದಾರೆ.

ಯುವಕನನ್ನು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗೆ ಕರೆತರಲಾಗಿದ್ದು, ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ತಮ್ಮ ಜೀವ ಉಳಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಬಿಸ್ವಾಜಿತ್ ನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.

ಏಕಾಂಗಿಯಾಗಿ ಚಾರಣಕ್ಕೆ ತೆರಳದಂತೆ ಎಚ್ಚರಿಕೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಾರಾಂತ್ಯದಲ್ಲಿ ಪ್ರವಾಸಿಗರು ರಾಮನಗರದ ಬೆಟ್ಟಗುಡ್ಡಗಳಿಗೆ ಚಾರಣಕ್ಕೆ ತೆರಳುತ್ತಾರೆ. ಆದರೆ, ಸೂಕ್ತ ಮಾಹಿತಿ ಮತ್ತು ಸಿದ್ಧತೆ ಇಲ್ಲದೆ ಏಕಾಂಗಿಯಾಗಿ ಚಾರಣ ಕೈಗೊಳ್ಳುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಪರಿಚಯವಿಲ್ಲದ ಅರಣ್ಯ ಪ್ರದೇಶ ಹಾಗೂ ದುರ್ಗಮ ಬೆಟ್ಟಗಳಿಗೆ ತೆರಳುವ ಮುನ್ನ ಸ್ಥಳೀಯರು ಅಥವಾ ಅನುಭವಿ ಮಾರ್ಗದರ್ಶಕರ ನೆರವು ಪಡೆಯಬೇಕು. ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande