ಬೆಂಗಳೂರಿನ ಐದು ಪಾಲಿಕೆಗಳಿಂದ 369 ಹೊಸ ನಾಯಕರ ಬೆಳವಣಿಗೆ: ಸಿಎಂ
ಬೆಂಗಳೂರು, 15 ನವೆಂಬರ್ (ಹಿ.ಸ.): ಬೆಂಗಳೂರು ನಗರವನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಂಗಡಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸ ವ್ಯವಸ್ಥೆಯಡಿ ಚುನಾವಣೆ ನಡೆಸಲು ನ್ಯಾಯಾಲಯದ ಅನುಮತಿ ಕೋರಲಾಗಿದೆ. ಅನುಮತಿ ದೊರೆತ ತಕ್ಷಣ ಚುನಾವಣೆ ನಡೆಸಿ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ 369 ಹೊಸ ನಾಯಕರನ್ನು ಬ
ಸಿಎಂ ಡಿ.ಕೆ.ಶಿವಕುಮಾರ್


ಬೆಂಗಳೂರು, 15 ನವೆಂಬರ್ (ಹಿ.ಸ.):

ಬೆಂಗಳೂರು ನಗರವನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಂಗಡಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸ ವ್ಯವಸ್ಥೆಯಡಿ ಚುನಾವಣೆ ನಡೆಸಲು ನ್ಯಾಯಾಲಯದ ಅನುಮತಿ ಕೋರಲಾಗಿದೆ. ಅನುಮತಿ ದೊರೆತ ತಕ್ಷಣ ಚುನಾವಣೆ ನಡೆಸಿ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ 369 ಹೊಸ ನಾಯಕರನ್ನು ಬೆಳೆಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಭಾರತೀನಗರ ಹಬ್ಬದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸುವ ಸಂಬಂಧ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಮಸೂದೆಗೆ ಒಪ್ಪಿಗೆ ದೊರೆತಿದೆ. ರಾಜ್ಯಪಾಲರ ಸಹಿಯೊಂದಿಗೆ ಅಧಿಸೂಚನೆಯೂ ಹೊರಬಿದ್ದಿದೆ. ಈ ಪ್ರಕ್ರಿಯೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.40 ಕೋಟಿಗೆ ತಲುಪಿದ್ದು, ಸಂಚಾರ ದಟ್ಟಣೆ ದೊಡ್ಡ ಸವಾಲಾಗಿದೆ. ಕಿರಿದಾದ ರಸ್ತೆಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಕಟ್ಟಡಗಳ ತೆರವಿಗೆ ಸಂಬಂಧಿಸಿದ ಕಾನೂನು ತೊಡಕುಗಳಿಂದ ರಸ್ತೆ ಅಗಲೀಕರಣ ಕಷ್ಟವಾಗಿದೆ. ಕಟ್ಟಡ ತೆರವು ವಿಚಾರ ನ್ಯಾಯಾಲಯಕ್ಕೆ ಹೋದರೆ ವರ್ಷಗಟ್ಟಲೆ ವಿಳಂಬವಾಗುವ ಸಾಧ್ಯತೆಯಿದೆ. ಹೀಗಾಗಿ ನಗರದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಅಭಿವೃದ್ಧಿಯೂ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರಿನಿಂದ ಸಂಗ್ರಹವಾಗುವ ತೆರಿಗೆ ಆದಾಯದ ದೊಡ್ಡ ಪಾಲನ್ನು ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯದ ರಸ್ತೆ ಅಭಿವೃದ್ಧಿಗೆ 20 ಸಾವಿರದಿಂದ 25 ಸಾವಿರ ಕೋಟಿ ರೂ. ಹಾಗೂ ನಗರಸಭೆ ಮತ್ತು ಪುರಸಭೆಗಳ ಅಭಿವೃದ್ಧಿಗೆ ಮುಂದಿನ ಒಂದು ವರ್ಷದಲ್ಲಿ 10 ಸಾವಿರ ಕೋಟಿ ರೂ. ವೆಚ್ಚ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಗ್ರಾಮೀಣಾಭಿವೃದ್ಧಿಗೆ ಪಂಚಾಯಿತಿಗಳ ಮೂಲಕ ಅನುದಾನ ಮೀಸಲಿಡಲಾಗಿದೆ. ಬೆಂಗಳೂರಿನ ಆದಾಯವನ್ನು ಇಡೀ ರಾಜ್ಯದ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande