
ಬೆಂಗಳೂರು, 15 ನವೆಂಬರ್ (ಹಿ.ಸ.):
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು 2014 ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಮತ್ತೊಮ್ಮೆ ಭಾರತವನ್ನು ಅವಮಾನಿಸುವ ರೀತಿಯಲ್ಲಿ, ಸಂವಿಧಾನ ವಿರೋಧಿಯಾಗಿ ಹಾಗೂ ಸಂಪೂರ್ಣ ಸುಳ್ಳು ಮಾಹಿತಿಯನ್ನು ಜನರಿಗೆ ನೀಡುವ ವಿಫಲ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿ ನಿನ್ನೆ ಹೈದರಾಬಾದ್ನ ಭಾರತ್ ಸಮಿತಿಯಲ್ಲಿ, 2014ರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂಬ ಅಸತ್ಯ ಹಾಗೂ ಬಾಲಿಶ ಹೇಳಿಕೆಯನ್ನು ನೀಡಿರುವುದನ್ನು ಯಾರೂ ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವ ಪಕ್ಷ ಸಂವಿಧಾನವನ್ನು ಮೊಟಕುಗೊಳಿಸಿ ಎಮರ್ಜೆನ್ಸಿಯನ್ನು ಹೇರಿತ್ತು ಹಾಗೂ ಯಾವ ಪಕ್ಷ ಸುಪ್ರೀಂ ಕೋರ್ಟ್ನ ಆದೇಶ ತಮ್ಮ ವಿರುದ್ಧ ಬಂದಾಗ ಅದರ ವಿರುದ್ಧವೇ ಕಾನೂನನ್ನು ರಚಿಸಿತ್ತು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಂತಹ ಪಕ್ಷದಿಂದ ಪ್ರಜಾಪ್ರಭುತ್ವದ ಪಾಠವನ್ನು ಕೇಳಲು ಭಾರತದ ಜನತೆ ತಯಾರಿಲ್ಲ ಎಂದು ಹೇಳಿದ್ದಾರೆ.
ಎರಡನೆಯದಾಗಿ, ರಾಹುಲ್ ಗಾಂಧಿಯವರು 2014ರಿಂದ ಸತತವಾಗಿ ಸೋಲನ್ನು ಅನುಭವಿಸಿ, ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಈ ಹೇಳಿಕೆಯು ಮುಂದಿನ 2029ರ ಚುನಾವಣೆಯಲ್ಲಿಯೂ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅವರು 2029ರ ಚುನಾವಣೆಯವರೆಗೆ ಕಾಯದೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದ್ದಾರೆ.
ಇವೆಲ್ಲಕ್ಕಿಂತಲೂ ಮಿಗಿಲಾಗಿ, ಭಾರತ ಜನತೆಗೆ ಪ್ರಜಾಪ್ರಭುತ್ವದ ಬಗ್ಗೆ ಇರುವ ಅಪಾರ ನಂಬಿಕೆ ಮತ್ತು ಅವರ ಪ್ರಜ್ಞಾವಂತ ಆಯ್ಕೆಗೆ ರಾಹುಲ್ ಗಾಂಧಿಯವರು ಅವಮಾನ ಮಾಡಿದಂತಾಗಿದೆ. ಆದ್ದರಿಂದ ಇಂತಹ ಹೇಳಿಕೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಹೇಳಬೇಕಾಗಿದೆ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿದ್ದರಿಂದ ನರೇಂದ್ರ ಮೋದಿಯವರನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿದೆ ಎಂಬುದನ್ನು ಕಾಂಗ್ರೆಸ್ನವರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.