
ಬೆಂಗಳೂರು, 15 ನವೆಂಬರ್ (ಹಿ.ಸ.):
ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಾಳೆಯಿಂದ ನವೆಂಬರ್ 18ರವರೆಗೆ ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ. ಮೇಳಕ್ಕೆ ಕೇಂದ್ರವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಮಾರು 10 ಎಕರೆ ಪ್ರದೇಶದಲ್ಲಿ 75 ವೈವಿಧ್ಯಮಯ ಬೆಳೆಗಳು ಹಾಗೂ ಬರ ಸಹಿಷ್ಣು ತಳಿಗಳನ್ನು ಬೆಳೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಸ್ತುಪ್ರದರ್ಶನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದು, ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ನೂತನ ಬೆಳೆ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ನವೆಂಬರ್ 17ರಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಬಾಲಕೃಷ್ಣ ಹಾಗೂ ಪುಟ್ಟರಂಗಶೆಟ್ಟಿ ಭಾಗವಹಿಸಲಿದ್ದಾರೆ.
ನವೆಂಬರ್ 18ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ರೈತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ, ಬೈರತಿ ಸುರೇಶ್ ಹಾಗೂ ಕೆ.ಎಸ್.ಬಸವಂತಪ್ಪ ಪಾಲ್ಗೊಳ್ಳಲಿದ್ದಾರೆ.
ಬರ ನಿರ್ವಹಣೆ ತಂತ್ರಜ್ಞಾನಕ್ಕೆ ಆದ್ಯತೆ
ಈ ಬಾರಿಯ ಕೃಷಿ ಮೇಳದಲ್ಲಿ ಬರ ನಿರ್ವಹಣಾ ತಂತ್ರಜ್ಞಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಬರ ಪರಿಸ್ಥಿತಿಗೆ ಸೂಕ್ತವಾದ ಬೆಳೆಗಳು, ಇಳುವರಿ ಹೆಚ್ಚಳದ ವಿಧಾನಗಳು, ಎಲ್ನಿನೊ ಪರಿಣಾಮ, ಹವಾಮಾನ ವೈಪರೀತ್ಯ, ಮಳೆನೀರು ಸಂರಕ್ಷಣೆ, ಭವಿಷ್ಯದ ಕೃಷಿ, ಕೀಟ ವಿಸ್ಮಯ ಹಾಗೂ ಮಧುವನ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ.
ವಿಜ್ಞಾನಿಗಳಾದ ಎಂ.ಎನ್.ತಿಮ್ಮೇಗೌಡ, ಜಿ.ಎಸ್.ಶ್ರೀನಿವಾಸ ರೆಡ್ಡಿ, ಜೆ.ಮೊಹಮ್ಮದ್ ಅಹ್ಮದ್, ಆರ್.ನಾಗರಾಜ, ಬಿ.ಎಲ್.ಮಂಜುನಾಥ್ ಹಾಗೂ ಆರ್.ಎಚ್.ಪಾಟೀಲ ವಿಚಾರ ಮಂಡಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ಬಸವರಾಜು ಮತ್ತು ಶ್ರೀವತ್ಸ ಗೋವಿಂದರಾಜು ಕೂಡ ತಮ್ಮ ಅನುಭವ ಹಾಗೂ ಕೃಷಿ ವಿಧಾನಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ
ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಮೇಳದಲ್ಲಿ ತಜ್ಞರ ಸಲಹಾ ಕೇಂದ್ರ ತೆರೆಯಲಾಗಿದೆ. ರೈತರು ಕೃಷಿ ಸಂಬಂಧಿತ ಸಮಸ್ಯೆಗಳಿಗೆ ತಜ್ಞರಿಂದ ನೇರವಾಗಿ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಸಿರಿಧಾನ್ಯ, ಸೂರ್ಯಕಾಂತಿ ಹಾಗೂ ವಿವಿಧ ಹೂವಿನ ಗಿಡಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ಬೆಳೆಸಲಾಗಿದೆ. ಕೃಷಿಯಲ್ಲಿನ ಹೊಸ ತಂತ್ರಜ್ಞಾನ, ಬರ ನಿರ್ವಹಣಾ ವಿಧಾನಗಳು ಮತ್ತು ಸುಧಾರಿತ ಬೆಳೆ ತಳಿಗಳ ಕುರಿತು ರೈತರಿಗೆ ಮಾಹಿತಿ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R