
ಬೆಂಗಳೂರು, 14 ನವೆಂಬರ್ (ಹಿ.ಸ.):
ನ.25ರಿಂದ ಕೋಳಿ ಸಾಕಾಣಿಕೆದಾರರ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ರಾಜ್ಯದಲ್ಲಿ ಚಿಕನ್ ಹಾಗೂ ಮೊಟ್ಟೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಕೋಳಿ ಸಾಕಾಣಿಕೆಗೆ ತಗಲುವ ಕನಿಷ್ಠ ವೆಚ್ಚವನ್ನು ಪಾವತಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲಾ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಈ ಮುಷ್ಕರಕ್ಕೆ ಕರೆ ನೀಡಿದೆ.
ಕೋಳಿ ಸಾಕಾಣಿಕೆದಾರರಿಗೆ ನ್ಯಾಯಯುತ ಬೆಲೆ ಹಾಗೂ ಕನಿಷ್ಠ ಸಾಕಾಣಿಕೆ ವೆಚ್ಚವನ್ನು ಪಾವತಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ. ಪ್ರತಿ ಕೆ.ಜಿ. ಕೋಳಿಗೆ ಕನಿಷ್ಠ 10 ರೂ. ಸಾಕಾಣಿಕೆ ವೆಚ್ಚವನ್ನು ನಿಗದಿಪಡಿಸಿ ಪಾವತಿಸುವಂತೆ ರೈತರು ಆಗ್ರಹಿಸಿದ್ದಾರೆ.
ಈ ಸಂಬಂಧ ಇಂಟಿಗ್ರೇಷನ್ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿರುವ ಕೋಳಿ ಸಾಕಾಣಿಕೆದಾರರು, ಈ ಹಿಂದೆ ಸರ್ಕಾರದಿಂದ ಆದೇಶ ಹೊರಡಿಸಿದ್ದರೂ ಕಂಪನಿಗಳು ಅದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 25ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಕೋಳಿ ಸಾಕಾಣಿಕೆದಾರರು ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಮಂಡ್ಯ ಜಿಲ್ಲಾ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆನಂದ್, ಕೋಳಿ ಸಾಕಾಣಿಕೆದಾರರಿಗೆ ಕನಿಷ್ಠ ಸಾಕಾಣಿಕೆ ವೆಚ್ಚವನ್ನಾದರೂ ಕಂಪನಿಗಳು ಪಾವತಿಸಬೇಕು.
ಪ್ರತಿ ಕೆ.ಜಿ.ಗೆ 10 ರೂಪಾಯಿ ನಿಗದಿಪಡಿಸಬೇಕು. ಈ ಹಿಂದೆ ಸರ್ಕಾರ ಆದೇಶ ನೀಡಿದ್ದರೂ ಇಂಟಿಗ್ರೇಷನ್ ಕಂಪನಿಗಳು ಅದನ್ನು ಪಾಲಿಸುತ್ತಿಲ್ಲ. ಸರ್ಕಾರ ಕೂಡಲೇ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.
ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ 25ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಳಿ ಸಾಕಾಣಿಕೆದಾರರ ಮುಷ್ಕರದಿಂದಾಗಿ ಕೋಳಿ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಚಿಕನ್ ಹಾಗೂ ಮೊಟ್ಟೆ ಗ್ರಾಹಕರಿಗೆ ತಾತ್ಕಾಲಿಕವಾಗಿ ಸಮಸ್ಯೆಯಾಗುವ ಆತಂಕ ಎದುರಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R