ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಗ್ಯಾನೇಂದ್ರ ಕುಮಾರ್, ಬಸವರಾಜ್ ಕನ್ನಾಳೆ ವಿರುದ್ಧ 1,500 ಪುಟಗಳ ಆರೋಪಪಟ್ಟಿ ಸಲ್ಲಿಕೆ
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮೊದಲ ಚಾರ್ಜ್ಶೀಟ್ ಸಲ್ಲಿಸಿದೆ. ಅಮಾನತುಗೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ವಿರುದ್ಧ 1,500 ಪುಟಗಳ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಹಣದ ವಹಿವಾಟ
kpsc-recruitment-scam-ed-files-first-chargesheet-against-ias-gyanendra-kumar-basavaraj-kannale


ಬೆಂಗಳೂರು, 14 ನವೆಂಬರ್ (ಹಿ.ಸ.): ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೊದಲ ಆರೋಪಪಟ್ಟಿ ಸಲ್ಲಿಸಿದೆ.

ಅಮಾನತುಗೊಂಡ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ವಿರುದ್ಧ ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸುಮಾರು 1,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.

ನೇಮಕಾತಿ ಅಕ್ರಮದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಹಣಕಾಸಿನ ವಹಿವಾಟು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಇಡಿ ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೊದಲ ಇಬ್ಬರು ಆರೋಪಿಗಳ ವಿರುದ್ಧ ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ.

ಇಡಿ ಆರೋಪಪಟ್ಟಿಯ ಪ್ರಕಾರ, ಜನವರಿ 8 ಮತ್ತು 9ರಂದು ಹಲವು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ಆರ್ಕಿಡ್ ನಿರ್ವಾಣ ಸೇರಿದಂತೆ ವಿವಿಧ ವಿಲ್ಲಾಗಳಲ್ಲಿ ಸುಮಾರು 20 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು.

ಜನವರಿ 7ರಂದು ಎಚ್ಪಿ ಪೆನ್ಡ್ರೈವ್ ಮೂಲಕ ಗ್ಯಾನೇಂದ್ರ ಕುಮಾರ್ ಅವರು ಬಸವರಾಜ್ ಕನ್ನಾಳೆಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒದಗಿಸಿದ್ದರು.

ಎರಡು ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ 80 ಅಂಕಗಳ ಪ್ರಶ್ನೆಗಳನ್ನು ಪೆನ್ಡ್ರೈವ್ನಲ್ಲಿ ನೀಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಅಂತಿಮ ಹಂತದ ಪ್ರಶ್ನೆಪತ್ರಿಕೆಯನ್ನೇ ಗ್ಯಾನೇಂದ್ರ ಕುಮಾರ್ ಮತ್ತು ಕನ್ನಾಳೆ ನಕಲು ಮಾಡಿದ್ದರು. ಕಚೇರಿಯಲ್ಲಿದ್ದ ಶಿಯೋಮಿ ಟ್ಯಾಬ್ಲೆಟ್ನಲ್ಲಿ ಪ್ರಶ್ನೆಪತ್ರಿಕೆಯನ್ನು ನಕಲು ಮಾಡಲಾಗಿತ್ತು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅದೇ ದಿನ ಟ್ಯಾಬ್ಲೆಟ್ ಅನ್ನು ಪುಡಿಪುಡಿ ಮಾಡಿ ಎಸೆಯಲಾಗಿತ್ತು ಎಂದು ಇಡಿ ಆರೋಪಿಸಿದೆ.

ಇನ್ನು, ಕೇವಲ ಇಬ್ಬರು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡುವುದಾಗಿ ಕನ್ನಾಳೆ, ಅಧಿಕಾರಿ ಗಂಗ್ವಾರ್ ಅವರನ್ನು ನಂಬಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ 80 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಕನ್ನಾಳೆ, ಬಳಿಕ ಅದನ್ನು 40 ಲಕ್ಷ ರೂ.ಗೆ ಇಳಿಸಿದ್ದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅಕ್ರಮದ ಮೂಲಕ ಒಟ್ಟು 1.70 ಕೋಟಿ ರೂ. ಹಣವನ್ನು ಗ್ಯಾನೇಂದ್ರ ಕುಮಾರ್ ಪಡೆದಿದ್ದಾರೆ ಎಂಬ ಆರೋಪವನ್ನೂ ಇಡಿ ಮಾಡಿದೆ.

ಅಕ್ರಮ ಹಣವನ್ನು ಕಾನೂನುಬದ್ಧ ಆದಾಯವೆಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿರುವುದಾಗಿ ಇಡಿ ತಿಳಿಸಿದೆ. 2025ರಲ್ಲಿ ಗ್ಯಾನೇಂದ್ರ ಕುಮಾರ್ ಅವರು ತಮ್ಮ ಅತ್ತಿಗೆಗೆ 15.39 ಲಕ್ಷ ರೂ. ನೀಡಿದ್ದು, ಸಹೋದರನ ಬ್ಯಾಂಕ್ ಖಾತೆಗೆ 10.94 ಲಕ್ಷ ರೂ. ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಪಟ್ಟಿಯಲ್ಲಿ ಇಬ್ಬರು ಪಶುವೈದ್ಯಾಧಿಕಾರಿ ಅಭ್ಯರ್ಥಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ. 1:3 ಅನುಪಾತದಲ್ಲಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿತ್ತು. ಕೆಪಿಎಸ್ಸಿಯ ಇತರ ಅಧಿಕಾರಿಗಳೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯನ್ನು ಇಡಿ ವ್ಯಕ್ತಪಡಿಸಿದೆ.

ಅಕ್ರಮದಿಂದ ಬಂದ ಹಣವನ್ನು ಉಮೇಶ್ ಮತ್ತು ಓಂಕಾರ್ ಎಂಬುವವರಿಗೆ ವರ್ಗಾಯಿಸಿರುವುದಾಗಿಯೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಿನಲ್ಲಿ, ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆಯಲ್ಲಿ ಇಡಿ ಮೊದಲ ಆರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣದಲ್ಲಿ ಇನ್ನಷ್ಟು ಮಂದಿಯ ಪಾತ್ರ ಹಾಗೂ ಅಕ್ರಮ ಹಣದ ವಹಿವಾಟಿನ ಕುರಿತು ತನಿಖೆ ಮುಂದುವರಿಯುವ ಸಾಧ್ಯತೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande