
ಗದಗ, 14 ನವೆಂಬರ್ (ಹಿ.ಸ.)
ವಿಶ್ವ ಕಲ್ಯಾಣ ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವಿಶೇಷ ವಿದ್ಯಾರ್ಥಿನಿ ಕು. ಸ್ಪಂದನ ಸಿ. ಚಿನ್ನಪ್ಪಗೌಡರ ವಹಿಸಿದ್ದು, ಕು. ಭಾವನಾ ಕೊಪ್ಪಳ, ಐಶ್ವರ್ಯ ಪರ್ವತಗೌಡರ, ಲಕ್ಷ್ಮಿ ಜಕ್ಕನಗೌಡರ ಹಾಗೂ ಸುಮಯ್ಯ ಮುಲ್ಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಶೇಷ ಮಕ್ಕಳನ್ನೇ ವೇದಿಕೆಯ ಮೇಲೆ ಕೂರಿಸಿ ಗೌರವಿಸುವ ಮೂಲಕ ಮಕ್ಕಳ ದಿನಾಚರಣೆಗೆ ವಿಶೇಷ ಮೆರುಗು ನೀಡಲಾಯಿತು.
ವಿಶೇಷ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ವಾಣಿಗಳು ಹಾಗೂ ಶ್ಲೋಕಗಳನ್ನು ಹೇಳುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಎಲ್ಲರ ಗಮನ ಸೆಳೆದರು. ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ವಿಶೇಷ ಮಕ್ಕಳು, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪಾಲಕರು ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಹದ್ದಣ್ಣವರ, ಮಕ್ಕಳಿಗೆ ಶ್ರೀಮಂತರಾಗಲು ಶಿಕ್ಷಣ ನೀಡುವುದಕ್ಕಿಂತ ಸಮಾಜದಲ್ಲಿ ಸಂತೋಷದಿಂದ ಹಾಗೂ ಗೌರವಯುತವಾಗಿ ಬದುಕಲು ಶಿಕ್ಷಣ ನೀಡಬೇಕು. ವಿಶೇಷ ಮಕ್ಕಳನ್ನು ಕಂಡಾಗ ಅನುಕಂಪ ತೋರುವ ಬದಲು ಪ್ರೀತಿ, ಗೌರವ ನೀಡಿ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು. ಸಮಾಜದ ಪ್ರತಿಯೊಬ್ಬರೂ ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಸಹಾಯ, ಸಹಕಾರ ನೀಡಿದಾಗ ಮಾತ್ರ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪಾಲಕರು ಪ್ರೇಕ್ಷಕರಾಗಿ ಕೆಳಗೆ ಕುಳಿತು ಮಕ್ಕಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ವಿಶೇಷ ಮಕ್ಕಳು ತಾವು ಯಾರಿಗಿಂತಲೂ ಕಡಿಮೆಯಿಲ್ಲ ಎಂಬುದನ್ನು ತಮ್ಮ ಪ್ರತಿಭೆಯ ಮೂಲಕ ಸಾಬೀತುಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಗೌರವಿಸಲಾಯಿತು. ಸಂಸ್ಥೆಯ ಸಿಬ್ಬಂದಿ ವರ್ಗ, ಪಾಲಕರು ಹಾಗೂ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP