
ವಿಜಯಪುರ, 14 ನವೆಂಬರ್ (ಹಿ.ಸ.):
ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಫೋನ್ ಕದ್ದಾಲಿಕೆ ಮೂಲಕ ದೇಶಾದ್ಯಂತ ರಾದ್ಧಾಂತ ಮಾಡಿಕೊಂಡು ಕುಳಿತಿದ್ದಾರೆ. ಯಾರನ್ನು ಕೀಳುಮಟ್ಟದಲ್ಲಿ ಟೀಕಿಸುತ್ತಾರೋ, ಅಂತಹವರನ್ನೇ ಒಂದೇ ವಾರದಲ್ಲಿ ತೊಳೆಯುವ ಯಂತ್ರಕ್ಕೆ ಹಾಕಿ, ಬೆಳ್ಳಗೆ ಸ್ವಚ್ಛಗೊಳಿಸಿ ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಇಂತಹವರಿಗೆ ನಾಚಿಕೆ ಇದೆಯೇ?” ಎಂದು ಪ್ರಶ್ನಿಸಿದರು.
ಫೋನ್ ಕದ್ದಾಲಿಕೆಯ ಹಿಂದೆ ಕೇಂದ್ರ ಸರ್ಕಾರದ ಭಯ ಮತ್ತು ಆತಂಕ ಅಡಗಿದೆ ಎಂದು ಆರೋಪಿಸಿದ ಅವರು, ಅಧಿಕಾರದ ದಬ್ಬಾಳಿಕೆ ವಿರುದ್ಧ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
“ದೇಶದ ಮಕ್ಕಳು ಬೀದಿಗಿಳಿದು ಹೋರಾಟಕ್ಕೆ ಮುಂದಾದಾಗ, ನಾವು ಅವರೊಂದಿಗೆ ಕೈಜೋಡಿಸಿದರೆ ಸಹಜವಾಗಿಯೇ ಅವರಿಗೆ ಭಯವಾಗುತ್ತದೆ. ಜನರು ಏನು ಮಾಡುತ್ತಿದ್ದಾರೆ, ಏನು ಚರ್ಚಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಅಧಿಕಾರದ ದುರ್ಬಳಕೆ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ” ಎಂದು ಮಧು ಬಂಗಾರಪ್ಪ ಆರೋಪಿಸಿದರು.
ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ವಿಚಾರವನ್ನು ಮುಂದಿಟ್ಟುಕೊಂಡು ಸಚಿವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R